ಹ್ಯಾಮಿಲ್ಟನ್: ಇದು ಕಾಕತಾಳೀಯ. ಗುರುವಾರ ಭಾರತ ಪುರುಷರ ಕ್ರಿಕೆಟ್ ತಂಡವು ಸೋತಿದ್ದ ಸೆಡನ್ ಪಾರ್ಕ್ ಮೈದಾನದಲ್ಲಿಯೇ ಮಹಿಳಾ ತಂಡವೂ ನಿರಾಶೆ ಅನುಭವಿಸಿತು.
ಈ ಮೈದಾನದಲ್ಲಿ ಆಡಲು ಇಳಿಯುವ ಮುನ್ನವೇ ಎರಡೂ ತಂಡಗಳು ಸರಣಿ ಕೈವಶ ಮಾಡಿಕೊಂಡಿದ್ದವು. ಆದರೆ ಇಲ್ಲಿಯ ಸೋಲಿನಿಂದಾಗಿ ಕ್ಲೀನ್‌ಸ್ವೀಪ್ ಸಾಧನೆ ಮಾಡುವ ಅವಕಾಶವನ್ನೂ ಕಳೆದುಕೊಂಡವು. ನಾಯಕ ರೋಹಿತ್ ಶರ್ಮಾ ಮತ್ತು ನಾಯಕಿ ಮಿಥಾಲಿ ರಾಜ್ ಅವರಿಬ್ಬರೂ ತಮ್ಮ ವಿಭಾಗಗಳಲ್ಲಿ 200ನೇ ಪಂದ್ಯವಾಡಿದ ಶ್ರೇಯ ಗಳಿಸಿದರು.
ಇದರೊಂದಿಗೆ ಭಾರತ ಮಹಿಳೆಯರ ತಂಡವು 2–1ರಿಂದ ಸರಣಿ ಗೆದ್ದು ಮಂಗಳ ಹಾಡಿದೆ. 3–1ರಿಂದ ಮುನ್ನಡೆಯಲಿರುವ ರೋಹಿತ್ ಬಳಗಕ್ಕೆ ಇನ್ನೊಂದು ಪಂದ್ಯ ಬಾಕಿಯಿದೆ.
ಶುಕ್ರವಾರ ಟಾಸ್ ಗೆದ್ದ ನ್ಯೂಜಿಲೆಂಡ್ ವನಿತೆಯರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೋದ ಎರಡೂ ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂದಾನ ಇಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಜಿಮಿಮಾ ರಾಡ್ರಿಗಲ್ 12 ರನ್ ಗಳಿಸಿ ಔಟಾದರು. ಇದರಿಂದಾಗಿ ತಂಡಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ. ದೀಪ್ತಿ ಶರ್ಮಾ (52; 90ಎಸೆತ, 4ಬೌಂಡರಿ) ಮತ್ತು ಹರ್ಮನ್‌ಪ್ರೀತ್ ಕೌರ್ (24;40ಎಸೆತ,2ಬೌಂಡರಿ) ಅವರ ಬ್ಯಾಟಿಂಗ್ ಬಲದಿಂದ ತಂಡವು 44 ಓವರ್‌ಗಳಲ್ಲಿ 149 ರನ್ ಗಳಿಸಿತು. ನ್ಯೂಜಿಲೆಂಡ್‌ನ ಬೌಲರ್‌ಗಳಾದ ಲಿಆ ತಹುಹು (26ಕ್ಕೆ3) ಮತ್ತು ಅನ್ನಾ ಪೀಟರ್ಸನ್ (28ಕ್ಕೆ4) ಅವರ ದಾಳಿಯಿಂದಾಗಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆತಿಥೇಯ ತಂಡದ ಆರಂಭಿಕ ಜೋಡಿ ಸೂಝಿ ಬೇಟ್ಸ್ (57; 64ಎ, 8ಬೌಂ. 1ಸಿ) ಮತ್ತು ಏಮಿ ಸೆಟ್ಟರ್‌ವೇಟ್ (ಅಜೇಯ 66; 74ಎ, 9ಬೌಂ, 1ಸಿ) ಅವರ ಉತ್ತಮ ಆಟದಿಂದ ತಂಡವು 29.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 153 ರನ್ ಗಳಿಸಿತು. ಸರಣಿಯಲ್ಲಿ ಮೊದಲ ಜಯದ ಸಂತಸ ಅನುಭವಿಸಿತು.
‘ದ್ವಿಶತಕ’ದ ಸಂಭ್ರಮದಲ್ಲಿ ನಾಯಕಿ
ಹ್ಯಾಮಿಲ್ಟನ್ (ಪಿಟಿಐ): ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಶುಕ್ರವಾರ ವಿಶ್ವದಾಖಲೆ ಮಾಡಿದರು.
ಮಹಿಳಾ ಕ್ರಿಕೆಟ್‌ನಲ್ಲಿ 200 ಏಕದಿನ ಪಂದ್ಯಗಳನ್ನು ಆಡಿದ ಮೊಟ್ಟಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದ್ದಾಯಿತು. ನ್ಯೂಜಿಲೆಂಡ್ ಎದುರಿನ ಈ ಪಂದ್ಯದಲ್ಲಿ ಅವರು ಹೊಡೆದಿದ್ದು ಬರೀ ಒಂಬತ್ತು ರನ್ ಮಾತ್ರ. ತಂಡವೂ ಸೋತಿತು. ಆದರೆ ಸರಣಿಯ ಎರಡನೇ ಪಂದ್ಯದಲ್ಲಿ ಅವರು ಗಳಿಸಿದ್ದ ಅಜೇಯ ಅರ್ಧಶತಕದಿಂದಾಗಿ ತಂಡವು ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತ್ತು.
1999ರಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಮಹಿಳೆಯರ ವಿಭಾಗದಲ್ಲಿ ನಡೆದಿರುವ ಒಟ್ಟು 263 ಪಂದ್ಯಗಳ ಪೈಕಿ ಅವರು ಇನ್ನೂರರಲ್ಲಿ ಆಡಿದ ಸಾಧನೆ ಮಾಡಿದ್ದಾರೆ. 36 ವರ್ಷದ ಮಿಥಾಲಿಯವರ ಖಾತೆಯಲ್ಲಿ 6622 ರನ್‌ಗಳು ಇವೆ. ಹೈದರಾಬಾದಿನ ಮಿಥಾಲಿ ಅವರು ಹತ್ತು ಟೆಸ್ಟ್ ಮತ್ತು 85 ಟ್ವೆಂಟಿ–20 ಪಂದ್ಯಗಳನ್ನೂ ಆಡಿದ್ದಾರೆ. ಇಂಗ್ಲೆಂಡ್‌ನ ಶಾರ್ಲೊಟ್ ಎಡ್ವರ್ಡ್ಸ್ ಅವರು 191 ಪಂದ್ಯಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.