ADVERTISEMENT

ಮೂರನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯ: ನ್ಯೂಜಿಲೆಂಡ್‌ಗೆ ಮಣಿದ ಇಂಗ್ಲೆಂಡ್‌

ಗ್ರ್ಯಾಂಡ್‌ಹೋಮ್‌ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 17:41 IST
Last Updated 5 ನವೆಂಬರ್ 2019, 17:41 IST
ಇಂಗ್ಲೆಂಡ್‌ ತಂಡದ ಲೂಯಿಸ್‌ ಗ್ರೆಗೋರಿ ವಿಕೆಟ್‌ ಉರುಳಿಸಿದ ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ (ಮಧ್ಯ) ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ತಂಡದ ಲೂಯಿಸ್‌ ಗ್ರೆಗೋರಿ ವಿಕೆಟ್‌ ಉರುಳಿಸಿದ ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ (ಮಧ್ಯ) ಸಹ ಆಟಗಾರರ ಜೊತೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ನೆಲ್ಸನ್‌: ನಿರ್ಣಾಯಕ ಘಟ್ಟದಲ್ಲಿ 10ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ತಂಡ ನ್ಯೂಜಿಲೆಂಡ್‌ ಎದುರಿನ ಮೂರನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 14ರನ್‌ಗಳಿಂದ ಸೋತಿದೆ.

ಈ ಜಯದೊಂದಿಗೆ ಟಿಮ್‌ ಸೌಥಿ ಸಾರಥ್ಯದ ನ್ಯೂಜಿಲೆಂಡ್‌ 5 ಪಂದ್ಯಗಳ ಸರಣಿಯಲ್ಲಿ 2–1 ಮುನ್ನಡೆ ಪಡೆದಿದೆ.

181ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್‌ ತಂಡ ಒಂದು ಹಂತದಲ್ಲಿ 2 ವಿಕೆಟ್‌ಗೆ 139ರನ್‌ ಕಲೆಹಾಕಿ ಸುಸ್ಥಿತಿಯಲ್ಲಿತ್ತು. ಮಿಷೆಲ್‌ ಸ್ಯಾಂಟನರ್‌ ಹಾಕಿದ 15ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ಎಯೊನ್‌ ಮಾರ್ಗನ್‌ (18; 13ಎ, 2ಸಿ) ಔಟಾಗುತ್ತಿದ್ದಂತೆ ಪ್ರವಾಸಿ ಪಡೆ ಕುಸಿತದ ಹಾದಿ ಹಿಡಿಯಿತು.

ADVERTISEMENT

ಸ್ಯಾಮ್‌ ಬಿಲ್ಲಿಂಗ್ಸ್‌ (1), ಸ್ಯಾಮ್‌ ಕರನ್‌ (2) ಮತ್ತು ಲೂಯಿಸ್‌ ಗ್ರೆಗೋರಿ (0) ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿದರು. ಜೇಮ್ಸ್‌ ವಿನ್ಸ್‌ (49; 39ಎ, 4ಬೌಂ, 1ಸಿ) ಅರ್ಧಶತಕದ ಅಂಚಿನಲ್ಲಿ ಎಡವಿದರು.

ಡೇವಿಡ್ ಮಲಾನ್‌ (55; 34ಎ, 8ಬೌಂ, 1ಸಿ) ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ಅಬ್ಬರದ ಆರಂಭ: ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡಕ್ಕೆ ಕಾಲಿನ್‌ ಮನ್ರೊ (6; 8ಎ) ಮತ್ತು ಮಾರ್ಟಿನ್‌ ಗಪ್ಟಿಲ್‌ (33; 17ಎ, 7ಬೌಂ) ಅಬ್ಬರದ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 23 ಎಸೆತಗಳಲ್ಲಿ 40ರನ್‌ ಕಲೆಹಾಕಿತು.

ಎರಡು ರನ್‌ಗಳ ಅಂತರದಲ್ಲಿ ಇವರಿಬ್ಬರೂ ಔಟಾದರು. ಇದರ ಬೆನ್ನಲ್ಲೇ ಟಿಮ್‌ ಸೀಫರ್ಟ್‌ (7) ಕೂಡ ಪೆವಿಲಿಯನ್‌ ಸೇರಿದರು. ನಂತರ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್ (55; 35ಎ, 5ಬೌಂ, 3ಸಿ) ಮತ್ತು ರಾಸ್‌ ಟೇಲರ್‌ (27; 24ಎ, 2ಬೌಂ, 1ಸಿ) ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಇವರು ನಾಲ್ಕನೇ ವಿಕೆಟ್‌ಗೆ 66ರನ್‌ ಸೇರಿಸಿದರು.

ಬಳಿಕ ಜೇಮ್ಸ್‌ ನೀಶಮ್‌ (20; 15ಎ, 2ಬೌಂ, 1ಸಿ) ಮತ್ತು ಮಿಷೆಲ್‌ ಸ್ಯಾಂಟನರ್‌ (15; 9ಎ, 2ಬೌಂ) ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್:
20 ಓವರ್‌ಗಳಲ್ಲಿ 7 ವಿಕೆಟ್‌ಗೆ 180 (ಮಾರ್ಟಿನ್‌ ಗಪ್ಟಿಲ್‌ 33, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 55, ರಾಸ್‌ ಟೇಲರ್‌ 27, ಜೇಮ್ಸ್‌ ನೀಶಮ್‌ 20, ಮಿಷೆಲ್‌ ಸ್ಯಾಂಟನರ್‌ 15; ಸ್ಯಾಮ್‌ ಕರನ್‌ 29ಕ್ಕೆ1, ಟಾಮ್‌ ಕರನ್‌ 29ಕ್ಕೆ2, ಪ್ಯಾಟ್ರಿಕ್‌ ಬ್ರೌನ್‌ 34ಕ್ಕೆ1, ಮ್ಯಾಥ್ಯೂ ಪಾರ್ಕಿನ್‌ಸನ್‌ 14ಕ್ಕೆ1).
ಇಂಗ್ಲೆಂಡ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 (ಡೇವಿಡ್‌ ಮಲಾನ್‌ 55, ಜೇಮ್ಸ್‌ ವಿನ್ಸ್‌ 49, ಎಯೊನ್‌ ಮಾರ್ಗನ್‌ 18, ಟಾಮ್‌ ಕರನ್‌ ಔಟಾಗದೆ 14; ಲಾಕಿ ಫರ್ಗ್ಯೂಸನ್‌ 25ಕ್ಕೆ2, ಬ್ಲೇರ್‌ ಟಿಕ್ನರ್‌ 25ಕ್ಕೆ2).

ಫಲಿತಾಂಶ: ನ್ಯೂಜಿಲೆಂಡ್‌ಗೆ 14ರನ್‌ ಗೆಲುವು.
ಪಂದ್ಯಶ್ರೇಷ್ಠ: ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.