ನವದೆಹಲಿ: 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರು ಹಸ್ತಾಕ್ಷರ ಮಾಡಿದ್ದ ಬ್ಯಾಟ್‌ನಾನ್ ಫಂಗಿಬಲ್ ಟೋಕನ್ (ಎನ್‌ಎಫ್‌ಟಿ) ಹರಾಜಿನಲ್ಲಿ ₹ 19 ಲಕ್ಷಕ್ಕೆ ಮಾರಾಟವಾಗಿದೆ.2016ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಸಹಿ ಮಾಡಿದ್ದ ಪೋಷಾಕು ₹ 22 ಲಕ್ಷ ಮೌಲ್ಯ ಗಳಿಸಿದೆ.
ದುಬೈನಲ್ಲಿ ಶುಕ್ರವಾರ ಈ ಹರಾಜು ಪ್ರಕ್ರಿಯೆಯನ್ನು ಕ್ರಿಕ್‌ಫ್ಲಿಕ್ಸ್ ಮತ್ತು ರೆವ್‌ಸ್ಪೋರ್ಟ್ಸ್ ಹಾಗೂ ಫ್ಯಾನೆಟಿಕ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಕ್ರೀಡಾ ಸಲಕರಣೆಗಳು, ಕಲಾತ್ಮಕ ಮತ್ತು ಡಿಜಿಟಲ್ ಕಾಣಿಕೆಗಳನ್ನು ಹರಾಜಿಗಿಡಲಾಯಿತು. ಒಂದೇ ದಿನ ₹ 2.50 ಕೋಟಿ ಸಂಗ್ರಹವಾಯಿತು.
ಹತ್ತು ವರ್ಷಗಳ ಹಿಂದೆ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡವು ವಿಶ್ವಕಪ್ ಜಯಿಸಿತ್ತು. ತಂಡದ ಆಟಗಾರರು ಹಸ್ತಾಕ್ಷರ ಮಾಡಿದ ಬ್ಯಾಟ್ ಖರೀದಿಗೆ ಬಿಡಿಂಗ್‌ನಲ್ಲಿ ಬಹಳಷ್ಟು ಪೈಪೋಟಿ ಕಂಡುಬಂದಿತು. ಆದರೆ, ಬ್ಯಾಟ್‌ಗಿಂತ ವಾರ್ನರ್ ಜೆರ್ಸಿಗೆ ಹೆಚ್ಚು ಮೌಲ್ಯ ದೊರೆಯಿತು.
ಸಚಿನ್ ತೆಂಡೂಲ್ಕರ್ ಅವರ 200ನೇ ಟೆಸ್ಟ್ ಪಂದ್ಯದ ಡಿಜಿಟಲ್ ಹಕ್ಕುಗಳನ್ನು ಅಮಲ್ ಖಾನ್ ಎಂಬುವವರು ₹ 30.01 ಲಕ್ಷಕ್ಕೆ ಖರೀದಿಸಿದರು. ಮುಂಬೈನ ಅಮಲ್ ಖಾನ್ ಅವರು ಸಚಿನ್ ಅವರ ಅಭಿಮಾನಿಯಾಗಿದ್ದಾರೆ.
ಡಾನ್ ಬ್ರಾಡ್ಮನ್ ಸಹಿ ಇರುವ ಎನ್‌ಎಫ್‌ಟಿ ಸ್ಟ್ಯಾಂಪ್ ₹ 19.95 ಲಕ್ಷಕ್ಕೆ ಮಾರಾಟವಾಯಿತು.
ಹಿನ್ನೆಲೆ ಗಾಯಕಿ ಲತಾ ಮಂಗೇಶಶ್ಕರ್ ಅವರು ನಡೆಸಿಕೊಟ್ಟಿದ್ದ 1983ರ ವಿಶ್ವಕಪ್ ವಿಜೇತ ಭಾರತ ತಂಡದ ಗೌರವಾರ್ಥದ ಸಂಗೀತ ಕಾರ್ಯಕ್ರಮದ ಧ್ವನಿಮುದ್ರಣಗಳು ₹ 15,75,740 ಗೆ ಮಾರಾಟವಾದವು.
ಇದಲ್ಲದೇ ಭಾರತ ಟೆಸ್ಟ್ ತಂಡದ ಮೊದಲ ನಾಯಕ ಕರ್ನಲ್ ಸಿ.ಕೆ. ನಾಯ್ಡು ಅವರ ಸ್ಮರಣಿಕೆಗಳು (₹ 5.62ಲಕ್ಷ) ಮತ್ತು ಬ್ಯಾಂಕ್ ಖಾತೆ ಪುಸ್ತಕ, ಪಾಸ್‌ಪೋರ್ಟ್ (₹ 73,529), ಮಹಿಳಾ ಕ್ರಿಕೆಟ್ ತಂಡದ ಬೌಲರ್ ಜೂಲನ್ ಗೋಸ್ವಾಮಿ ಅವರು 2017ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ (₹ 7.50ಲಕ್ಷ) ಮಾರಾಟವಾದವು. ದಿವಂಗತ ಬಾಳಾಸಾಹೇಬ ಠಾಕ್ರೆಯವರ ಕಾರ್ಟೂನುಗಳು ಈ ಪ್ರಕ್ರಿಯೆಯಲ್ಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.