ಲಂಡನ್: ವಿಶ್ವದ ಪ್ರಮುಖ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗಳನ್ನು ಕ್ಲೀನ್‌ಸ್ವೀಪ್ ಮಾಡಿದರೆ, ಪ್ರತಿಷ್ಠಿತ ಆ್ಯಷಸ್ ಸರಣಿಗೆ ನಮಗೆ ಉತ್ತಮ ಅಭ್ಯಾಸ ಮಾಡಿದಂತಾಗುತ್ತದೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷಾಂತ್ಯದಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಎದುರು ಆ್ಯಷಸ್ ಸರಣಿಯಲ್ಲಿ ಆಡಲಿದೆ.
ಆ್ಯಷಸ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ರೂಟ್ ಪಡೆ ತವರಿನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಒಟ್ಟು ಏಳು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಕಿವೀಸ್ ಎದುರಿನ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯ ಬುಧವಾರ ಆರಂಭವಾಗಿದೆ. ಆಗಸ್ಟ್ –ಸೆಪ್ಟೆಂಬರ್‌ನಲ್ಲಿ ಭಾರತದ ವಿರುದ್ಧ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ.
‘ಈ ಇಡೀ ಬೇಸಿಗೆಯಲ್ಲಿ ಆ್ಯಷಸ್ ಸರಣಿಯ ಕುರಿತು ನಿರಂತರ ಚರ್ಚೆಗಳು ನಡೆದಿವೆ. ಆಸ್ಟ್ರೇಲಿಯಾ ವಿರುದ್ಧದ ಆ ಸರಣಿಗೆ ದೀರ್ಘಕಾಲದಿಂದ ಯೋಜನೆ ರೂಪಿಸುತ್ತಿದ್ದೇವೆ. ಒಬ್ಬ ಇಂಗ್ಲಿಷ್ ಆಟಗಾರ, ಅಭಿಮಾನಿಯಾಗಿ ನನಗೆ ಅದು ಪ್ರತಿಷ್ಠಿತ ಸರಣಿ‘ ಎಂದು ರೂಟ್ ಹೇಳಿದರು.
‘ಆ್ಯಷಸ್ ಸರಣಿಗೆ ಉತ್ತಮವಾಗಿ ಸಜ್ಜುಗೊಳ್ಳಲು ವಿಶ್ವದ ಎರಡು ಪ್ರಮುಖ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ಎದುರಿನ ಎಲ್ಲ ಏಳೂ ಪಂದ್ಯಗಳನ್ನು ನಾವು ಗೆಲ್ಲಬೇಕು‘ ಎಂದು ಅವರು ನುಡಿದರು.
‘ನಮಗೆ ಇಬ್ಬರು ಪ್ರಮುಖ ಎದುರಾಳಿಗಳು ಯಾರೆಂದು ನೀವು ಕೇಳುವಂತಿಲ್ಲ. ಪ್ರತಿ ಪಂದ್ಯಕ್ಕೂ ಬೆವರು ಹರಿಸಬೇಕಾಗುತ್ತದೆ. ಆ್ಯಷಸ್‌ಗೂ ಮೊದಲು ನಡೆಯುವ ಈ ಟೆಸ್ಟ್‌ಗಳ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿರಲಿದೆ‘ ಎಂದು ರೂಟ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.