ನವದೆಹಲಿ: ಅಹಮದಾಬಾದಿನಲ್ಲಿ ಆಯೋಜಿಸಲಾಗಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ದಿನಾಂಕ ಬದಲಾಗುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಅಕ್ಟೋಬರ್ 15ರಂದೇ ನಡೆಯಲಿದೆ ಈ ಬಗ್ಗೆ ಎರಡು–ಮೂರು ದಿನಗಳಲ್ಲಿ ಖಚಿತ ಮಾಹಿತಿ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅ.15ರಂದು ನವರಾತ್ರಿ ಆರಂಭವಾಗುತ್ತಿದೆ. ಆದ್ದರಿಂದ ಸ್ಥಳೀಯ ಭದ್ರತಾ ಇಲಾಖೆಗಳು ಈ ಪಂದ್ಯವನ್ನು ಅಕ್ಟೋಬರ್ 14ರಂದು ಬದಲಾವಣೆ ಮಾಡಲು ಕೇಳಿದ್ದವು. ನವರಾತ್ರಿ ಹಾಗೂ ಪಂದ್ಯಕ್ಕೆ ಭದ್ರತಾ ಸಿಬ್ಬಂದಿ ನಿಯೋಜನೆ ಕಷ್ಟವಾಗಲಿದೆ ಎಂದು ಗುಜರಾತ್ ಪೋಲೀಸ್ ಇಲಾಖೆ ಹೇಳಿತ್ತು.
ಪಂದ್ಯದ ದಿನಾಂಕ ಬದಲಾವಣೆ ಮಾಡಿದರೆ ಪಂದ್ಯ ನೋಡಲು ದೇಶ, ವಿದೇಶಗಳಿಂದ ಬರುತ್ತಿರುವ ಅಭಿಮಾನಿಗಳಿಗೆ ತೊಂದರೆಯಾಗಲಿದೆ. ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದ ದಿನದಿಂದಲೇ ಅಹಮದಾಬಾದಿನ ಹೋಟೆಲ್ ಕೋಣೆಗಳ ಬುಕ್ ಆಗಿದ್ದು ರೂಮ್ ದರ ಹಾಗೂ ವಿಮಾನ ಪ್ರಯಾಣದ ದರಗಳು ಗಗನಕ್ಕೇರಿವೆ.
ಈ ಬಗ್ಗೆ ಐಸಿಸಿ ಮತ್ತು ಬಿಸಿಸಿಐ ಮಾತುಕತೆ ನಡೆಸಿ ಎರಡು–ಮೂರು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಯ್ ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.