ನವದೆಹಲಿ: ‘ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರಂಥ ಆಕ್ರಮಣಶೀಲತೆ ತಂಡದ ಇನ್ನಾವುದೇ ಆಟಗಾರರಲ್ಲಿ ಕಂಡಿಲ್ಲ’ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಹೇಳಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿರುವ ಬಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಾಳಿ ತಂಡದ ವಿರುದ್ಧ ಮೇಲುಗೈ ಸಾಧಿಸಲು ಸಿರಾಜ್ ಅವರಂತಹ ಆಕ್ರಮಣಶೀಲತೆ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮೈದಾನದಲ್ಲಿ ಸಿರಾಜ್ ಅವರು ವ್ಯಕ್ತಪಡಿಸುವ ಭಾವನೆಗಳಾಗಲಿ, ವಿಕೆಟ್ ಪಡೆದಾಗ ಸಂಭ್ರಮಿಸುವುದಾಗಲಿ ಅತಿರೇಕದ ವರ್ತನೆ ಎನ್ನಿಸುವುದಿಲ್ಲ. ಬದಲಿಗೆ ಅವರಲ್ಲಿ ಮುಗ್ಧತೆ ಕಂಡುಬರುತ್ತದೆ ಎಂದು ಬಟ್ ತಿಳಿಸಿದ್ದಾರೆ.
ಸಿರಾಜ್ ಅವರಲ್ಲಿ ವಿಭಿನ್ನ ಸ್ವಭಾವವಿದೆ. ಆಡುವ ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆಯುತ್ತಾರೆ. ಒಂದು ಪಂದ್ಯದಿಂದ ಮತ್ತೊಂದು ಪಂದ್ಯಕ್ಕೆ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಾರೆ. ಅವರ ಬಗ್ಗೆ ಮೆಚ್ಚುಗೆಯಾಗುತ್ತದೆ ಎಂದಿದ್ದಾರೆ.
ಸಿರಾಜ್, ಎದುರಾಳಿ ತಂಡದ ಬ್ಯಾಟ್ಸ್‌ಮನ್ ಮೇಲೆ ಇನಿಂಗ್ಸ್‌ನ ಆರಂಭದಲ್ಲಾಗಲಿ ಅಥವಾ ಕೊನೆಯವರೆಗೂ ಪ್ರಭಾವ ಬೀರುತ್ತಾರೆ. ನನ್ನ ಪ್ರಕಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ರೀತಿಯ ವರ್ತನೆ, ಆಕ್ರಮಣಶೀಲತೆ ಗೆಲುವಿಗೆ ಬಹಳಷ್ಟು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲಿನತ್ತ ಸಾಗಿದ್ದ ಭಾರತಕ್ಕೆ ಅಮೋಘ ಜೊತೆಯಾಟದ ಮೂಲಕ ಮರುಜೀವ ತುಂಬಿದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ನಂತರ ಬೌಲಿಂಗ್‌ನಲ್ಲೂ ಭರ್ಜರಿ ದಾಳಿ ಮಾಡಿದರು. ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮಾ ಕೂಡ ಮಿಂಚಿದರು. ಇದರ ಪರಿಣಾಮ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡ 151 ರನ್‌ಗಳ ಅಮೋಘ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.