ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್ ಇದುವರೆಗೆ ಟ್ರೋಫಿ ಗೆದ್ದಿಲ್ಲ.
ಈ ನಡುವೆ ಆರ್‌ಸಿಬಿ ಟ್ರೋಫಿ ಗೆಲ್ಲುವವರೆಗೂ ಮದುವೆಯಾಗುವುದಿಲ್ಲ ಎಂದು ಯುವತಿಯೊಬ್ಬಳು ಪೋಸ್ಟರ್ ಪ್ರದರ್ಶಿಸಿರುವುದು ವೈರಲ್ ಆಗಿದೆ.
ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಈ ದೃಶ್ಯ ಕಂಡುಬಂತು. ಆರ್‌ಸಿಬಿ ಕಟ್ಟಾ ಅಭಿಮಾನಿಯಾಗಿರುವ ಯುವತಿ ಈ ಬಗ್ಗೆ ದೃಢ ನಿರ್ಧಾರ ತಳೆದಿದ್ದಾರೆ. ಅಭಿಮಾನಿಗಳಲ್ಲೂ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುವತಿಯ ಪೋಸ್ಟರ್ ಟ್ವೀಟ್ ಮಾಡಿರುವ ಕ್ರಿಕೆಟಿಗ ಅಮಿತ್ ಮಿಶ್ರಾ, ಯುವತಿಯ ಹೆತ್ತವರಿಗಾಗಿ ಅನುಕಂಪ ವ್ಯಕ್ತಪಡಿಸಿದ್ದಾರೆ.
ಐಪಿಎಲ್ 15ನೇ ಆವೃತ್ತಿಗೆ ಕಾಲಿಟ್ಟಿರುವಂತೆಯೇ ಆರ್‌ಸಿಬಿ ಇದುವರೆಗೆ ಟ್ರೋಫಿ ಗೆಲ್ಲದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮೂರು ಬಾರಿ ರನ್ನರ್-ಅಪ್ ಪ್ರಶಸ್ತಿ ಗೆದ್ದಿರುವುದು ತಂಡದ ಶ್ರೇಷ್ಠ ಸಾಧನೆಯಾಗಿದೆ.
ಐಪಿಎಲ್ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ನಾಯಕ ಸ್ಥಾನ ತ್ಯಜಿಸಿದ್ದರು. ಪ್ರಸ್ತುತ ಫಫ್ ಡು ಪ್ಲೆಸಿ ನಾಯಕತ್ವದಲ್ಲಿ ಆರ್‌ಸಿಬಿ, ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಕೆಲವು ದಿನಗಳ ಹಿಂದೆಯಷ್ಟೇ ವಿರಾಟ್ ಕೊಹ್ಲಿ 71ನೇ ಶತಕದ ಮೈಲಿಗಲ್ಲು ತಲುಪವವರೆಗೂ ಡೇಟಿಂಗ್ ಮಾಡುವುದಿಲ್ಲ ಎಂದು ಯುವತಿಯೊಬ್ಬಳು ಪೋಸ್ಟರ್ ಪ್ರದರ್ಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.