ADVERTISEMENT

Women's T20 WC: ಭಾರತ ತಂಡಕ್ಕೆ ಸೋಲು; ಸೋಫಿ, ತಹುಹು ಮಿಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2024, 17:56 IST
Last Updated 4 ಅಕ್ಟೋಬರ್ 2024, 17:56 IST
<div class="paragraphs"><p>ನ್ಯೂಜಿಲೆಂಡ್ ತಂಡ</p></div>

ನ್ಯೂಜಿಲೆಂಡ್ ತಂಡ

   

( ಚಿತ್ರ ಕೃಪೆ–White Ferns X)

ದುಬೈ (ಪಿಟಿಐ): ಸೋಫಿ ಡಿವೈನ್ ಅವರ ಮಿಂಚಿನ ಅರ್ಧಶತಕ ಮತ್ತು ಲೀಯಾ ತಹುಹು ಅವರ ಉತ್ತಮ ಬೌಲಿಂಗ್ ಬಲದಿಂದ ನ್ಯೂಜಿಲೆಂಡ್ ತಂಡವು 58 ರನ್‌ಗಳಿಂದ ಭಾರತ ತಂಡಕ್ಕೆ ಸೋಲುಣಿಸಿತು. 

ADVERTISEMENT

ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೋಫಿ (ಔಟಾಗದೆ 57; 36ಎ) ಅವರ ಮಿಂಚಿನ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 160 ರನ್‌ ಗಳಿಸಿತು. 

ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡಕ್ಕೆ ತಹುಹು (15ಕ್ಕೆ3) ಬಿಸಿ ಮುಟ್ಟಿಸಿದರು. ಭಾರತ ತಂಡವು 19 ಓವರ್‌ಗಳಲ್ಲಿ 102 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ತಹುಹು ಅವರು ಮಧ್ಯಮಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಕೆಡವಿದರು. ರೋಸ್‌ಮೆರಿ (19ಕ್ಕೆ4) ಕೆಳಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಗಳಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಸೂಜಿ ಬೇಟ್ಸ್‌ (27; 24ಎ) ಮತ್ತು ಜಾರ್ಜಿಯಾ ಪಿಮರ್ (34; 23ಎ) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 67 ರನ್‌ ಸೇರಿಸಿದರು. ಆರನೇ ಓವರ್‌ನಲ್ಲಿ ಬೇಟ್ಸ್‌ ಕ್ಯಾಚ್ ಕೈಚೆಲ್ಲಿದ ರಿಚಾ ಘೋಷ್ ‘ಜೀವದಾನ’ ನೀಡಿದರು.  ಆದರೆ  ಅರುಂಧತಿ ರೆಡ್ಡಿ ಅವರು  ಹಾಕಿದ ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಸೂಜಿ ಕ್ಯಾಚ್‌ ಪಡೆಯುವಲ್ಲಿ ಶ್ರೇಯಾಂಕಾ ಪಾಟೀಲ ಯಶಸ್ವಿಯಾದರು. ನಂತರದ ಓವರ್‌ನಲ್ಲಿ ಜಾರ್ಜಿಯಾ ಔಟಾದರು.  ಅಮೆಲಿಯಾ ಕೆರ್(13 ರನ್) ಅವರನ್ನು ರೇಣುಕಾ ಯಾದವ್ ಔಟ್ ಮಾಡಿದರು. ಆಗ ಕಿವೀಸ್ ತಂಡದ ಮೊತ್ತ ಇನ್ನೂ ಮೂರಂಕಿಯನ್ನೂ ಮುಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಇನಿಂಗ್ಸ್ ಮೇಲೆ ಹಿಡಿತ ಸಾಧಿಸುವ ಭಾರತದ ಬೌಲರ್‌ಗಳ ಯೋಜನೆಯನ್ನು ಸೋಫಿ ವಿಫಲಗೊಳಿಸಿದರು. ತಂಡದ ಪ್ರಮುಖ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ ಮತ್ತು ಶ್ರೇಯಾಂಕಾ ಅವರನ್ನು ಹೆಚ್ಚು ದಂಡಿಸಿದರು. ಅವರ ಆಟದಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 60 ರನ್‌ಗಳು ತಂಡದ ಖಾತೆ ಸೇರಿದವು.  

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 160 (ಸೂಜಿ ಬೇಟ್ಸ್‌ 27, ಜಾರ್ಜಿಯಾ ಪಿಮರ್ 34, ಸೋಫಿ ಡಿವೈನ್ ಔಟಾಗದೆ 57, ರೇಣುಕಾ ಠಾಕೂರ್ ಸಿಂಗ್ 27ಕ್ಕೆ2, ಅರುಂಧತಿ ರೆಡ್ಡಿ 28ಕ್ಕೆ1, ಆಶಾ ಶೋಭನಾ 22ಕ್ಕೆ1)

ಭಾರತ:  19 ಓವರ್‌ಗಳಲ್ಲಿ 102 (ಸ್ಮೃತಿ ಮಂದಾನ 12, ಹರ್ಮನ್‌ಪ್ರೀತ್ ಕೌರ್ 15, ಜೆಮಿಮಾ ರಾಡ್ರಿಗಸ್ 13, ದೀಪ್ತಿ ಶರ್ಮಾ 13, ಈಡನ್ ಕಾರ್ಸನ್ 34ಕ್ಕೆ2, ರೋಸ್‌ಮೆರಿ ಮೇರ್ 19ಕ್ಕೆ4, ಲೀಯಾ ತಹುಹು 15ಕ್ಕೆ3) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 58 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ಸೋಫಿ ಡಿವೈನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.