ಮುಂಬೈ: ನ್ಯೂಜಿಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಸಿದ ತಾಲೀಮಿನಲ್ಲಿ ಒಂದಿಷ್ಟು ಸ್ವಾರಸ್ಯಕರ ಸಂಗತಿಗಳು ಕಂಡವು.
ಮೊದಲನೇಯದಾಗಿ; ಮುಂಬೈ ಕ್ರಿಕೆಟ್ ಸಂಸ್ಥೆಯು (ಎಂಸಿಎ) ನೆಟ್‌ನಲ್ಲಿ ಬೌಲಿಂಗ್ ಮಾಡಲು ಸ್ಥಳೀಯ 35 ಬೌಲರ್‌ಗಳನ್ನು ಕರೆಸಿತ್ತು. ಭಾರತ ತಂಡವು ಅಭ್ಯಾಸ ಆರಂಭಿಸುವ ಮುನ್ನ ನ್ಯೂಜಿಲೆಂಡ್ ಪಡೆಯು ಕೇವಲ ಅರ್ಧಗಂಟೆ ಮಾತ್ರ ಅಭ್ಯಾಸ ಮಾಡಿತು. ಆದರೆ ಅವರಿಗೆ ಬೆರಳೆಣಿಕೆಯಷ್ಟು ಸಂಖ್ಯೆಯ ನೆಟ್ ಬೌಲರ್‌ಗಳು ಇದ್ದರು.
ಭಾರತ ತಂಡವನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಆಟಗಾರರು, ಕೋಚ್‌ಗಳು ಪರಸ್ಪರ ದೀರ್ಘ ಸಂವಾದಗಳಲ್ಲಿ ತೊಡಗಿದ್ದರು. ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಅವರು ಮೊದಲಿಗೆ ಥ್ರೋಡೌನ್ ಪರಿಣತರ ಎಸೆತಗಳನ್ನು ಎದುರಿಸಿದರು. ನಂತರ ವೇಗದ ಬೌಲರ್‌ಗಳ ಎದುರು ಬ್ಯಾಟಿಂಗ್ ಮಾಡಿದರು.
ನೆಟ್ಸ್‌ನಲ್ಲಿ ಬ್ಯಾಟರ್‌ಗಳಿಗೆ ಸ್ಪಿನ್ನರ್‌ಗಳು ಬೌಲಿಂಗ್ ಮಾಡಲು ಆರಂಭಿಸಿದಾಗ ವಿಕೆಟ್‌ಕೀಪರ್ ಇದ್ದರು. ಒಂದು ಹಂತದಲ್ಲಿ ಸಿಲ್ಲಿ ಪಾಯಿಂಟ್ ಫೀಲ್ಡರ್ ಅನ್ನು ಕೂಡ ನಿಯೋಜಿಸಲಾಯಿತು.
ತಂಡದ ಬೌಲರ್‌ಗಳು ಸರದಿ ಸಾಲಿನಲ್ಲಿ ತಮ್ಮ ಅಭ್ಯಾಸ ನಡೆಸಿದರು. ಆದರೆ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್ ಅಭ್ಯಾಸ ಮಾಡಲಿಲ್ಲ. ಬದಲಿಗೆ ದೀರ್ಘ ಸಮಯದವರೆಗೆ ಬ್ಯಾಟಿಂಗ್ ಮಾಡಿದರು. ಈ ಹಂತದಲ್ಲಿ ಅವರು ನಾಯಕ ರೋಹಿತ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಬೌಲರ್‌ಗಳಾದ ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಅವರು ಪೂರ್ಣಪ್ರಮಾಣದಲ್ಲಿ ಬೌಲಿಂಗ್ ಅಭ್ಯಾಸ ಮಾಡಿದರು.
ಇದರಿಂದಾಗಿ ಈ ಪಂದ್ಯದಲ್ಲಿ ಬೂಮ್ರಾ ಅವರಿಗೆ ವಿಶ್ರಾಂತಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ದೃಷ್ಟಿಯಿಂದ ಬೂಮ್ರಾ ಅವರಿಗೆ ಬಿಡುವು ನೀಡಬಹುದು. ಅವರ ಬದಲಿಗೆ ಆಕಾಶ್ ಅಥವಾ ಸಿರಾಜ್ ಕಣಕ್ಕಿಳಿಯಬಹುದು. ಇಲ್ಲಿಯ ಪಿಚ್ ನಲ್ಲಿ ಇಬ್ಬರು ಮಧ್ಯಮವೇಗಿಗಳಿಗೆ ಅವಕಾಶ ಕೊಡುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.