ಬೆಂಗಳೂರು: ಪ್ರತಿ ಬಾರಿ ಕಣಕ್ಕಿಳಿದಾಗಲೂ ಪೂರ್ಣ ಸಾಮರ್ಥ್ಯದೊಂದಿಗೆ ಆಡುವ ಹಾಗೂ ಇತರ ಆಟಗಾರರನ್ನು ಹುರಿದುಂಬಿಸುವ ವಿರಾಟ್ ಕೊಹ್ಲಿ, ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಅವರು, ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೂ ಆಧಾರವಾಗಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಲೀಗ್ ಹಂತದಲ್ಲಿ ಆಡಿರುವ 13 ಪಂದ್ಯಗಳಿಂದ 1 ಶತಕ ಹಾಗೂ 5 ಅರ್ಧಶತಕ ಸಹಿತ 661 ರನ್ ಗಳಿಸಿದ್ದಾರೆ.
ಆರ್‌ಸಿಬಿ ತಂಡ ಟ್ವಿಟರ್/ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿರುವ 35 ವರ್ಷದ ಕೊಹ್ಲಿ, ವಿಷಾದ ಮುಕ್ತ ಜೀವನ ನಡೆಸುವ ಹಂಬಲವೇ ತಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ನಿರಂತರ ರನ್ ಗಳಿಕೆ ಹಸಿವಿಗೆ ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೊಹ್ಲಿ, 'ಕ್ರೀಡಾಪಟುವಾಗಿ, ವೃತ್ತಿ ಬದುಕಿನ ಕೊನೇ ದಿನ ಬಂದೇ ಬರುತ್ತದೆ. ಅದರಂತೆ ಮೊದಲೇ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಾಧಿಸಿದ್ದರೆ.. ಅದನ್ನು ಮಾಡಿದ್ದರೆ.. ಎಂದೆಲ್ಲ ಯೋಚಿಸುತ್ತಾ ವೃತ್ತಿ ಜೀವನವನ್ನು ಕೊನೆಗೊಳಿಸಲು ಬಯಸುವುದಿಲ್ಲ. ಹಾಗೆಲ್ಲಾ ಯೋಚಿಸಿದರೂ ನಾನು ಸದಾಕಾಲ ಮುಂದುವರಿಯಲು ಸಾಧ್ಯವಿಲ್ಲ' ಎಂದಿದ್ದಾರೆ.
ಮುಂದುವರಿದು, 'ಯಾವುದನ್ನೂ ಅರ್ಧಕ್ಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಒಮ್ಮೆ ಮುಗಿದ ಮೇಲೆ ಯಾವುದಕ್ಕೂ ವಿಷಾದಿಸುವಂತಿರಬಾರದು. ನಾನು ಹಾಗೆ ಮಾಡುವುದಿಲ್ಲ ಎಂಬ ಬಗ್ಗೆ ಖಾತ್ರಿ ಇದೆ. ಒಂದು ಬಾರಿ ಆಟ ನಿಲ್ಲಿಸಿದರೆ, ನಾನು ಹೊರಟು ಹೋಗುತ್ತೇನೆ. ಸ್ವಲ್ಪ ಕಾಲ ನೀವು ನನ್ನನ್ನು ನೋಡಲಾರಿರಿ. ಅದಕ್ಕಾಗಿ, ಆಡುವ ಕೊನೆವರೆಗೂ ನಾನು ಪೂರ್ಣ ಸಾಮರ್ಥ್ಯದೊಂದಿಗೆ ಆಡಲು ಬಯಸುತ್ತೇನೆ. ಅದೊಂದೇ ವಿಚಾರ ನನ್ನನ್ನು ಮುನ್ನಡೆಸುತ್ತಿದೆ' ಎಂದು ತಿಳಿಸಿದ್ದಾರೆ.
2008ರಿಂದಲೂ ಆರ್‌ಸಿಬಿ ಪರ ಆಟ
2008ರಲ್ಲಿ 19 ವರ್ಷದೊಳಗಿನ ಟೀಂ ಇಂಡಿಯಾದ ನಾಯಕನಾಗಿದ್ದ ಕೊಹ್ಲಿ, ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. ಅದರ ಬೆನ್ನಲ್ಲೇ ನಡೆದ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸ್, ಕೊಹ್ಲಿಯನ್ನು ಖರೀದಿಸಿತ್ತು. ಆಗಿನಿಂದಲೂ ಆರ್‌ಸಿಬಿ ಪರ ಆಡುತ್ತಿದ್ದಾರೆ. 2013ರಿಂದ ತಂಡ ಮುನ್ನಡೆಸಿದ್ದ ಕೊಹ್ಲಿ, 2021ರಲ್ಲಿ ನಾಯಕತ್ವ ತ್ಯಜಿಸಿದ್ದಾರೆ. ಇದೀಗ ದಕ್ಷಿಣ ಆಫ್ರಿಕಾದ ಫಫ್ ಡು ಪ್ಲೆಸಿ ನಾಯಕರಾಗಿದ್ದಾರೆ.
ಆರ್‌ಸಿಬಿಯ ನಾಯಕತ್ವವನ್ನು ಮತ್ತೆ ಕೊಹ್ಲಿಗೆ ವಹಿಸಿಕೊಡಬೇಕು ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಇತ್ತೀಚೆಗೆ ಹೇಳಿದ್ದರು. ಕೊಹ್ಲಿಯು ದೃಢತೆ, ಬದ್ಧತೆಯ ಜೊತೆಜೊತೆಗೆ ಆಕ್ರಮಣಕಾರಿಯಾಗಿ ಆಡುತ್ತಾರೆ. ಇದರಿಂದ ತಂಡಕ್ಕೆ ನೆರವಾಗಲಿದೆ ಎಂದು ಪ್ರತಿಪಾದಿಸಿದ್ದರು.
ಕೊಹ್ಲಿ ಸಾಧನೆ
ಭಾರತ ತಂಡದ ಪರ 113 ಟೆಸ್ಟ್, 292 ಏಕದಿನ ಹಾಗೂ 117 ಟಿ20 ಪಂದ್ಯಗಳಲ್ಲಿ ಆಡಿರುವ ಕೊಹ್ಲಿ, 26,000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಕಲೆಹಾಕಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿರುವ 250 ಪಂದ್ಯಗಳಿಂದ 7,924 ರನ್ ಗಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 50 ಶತಕ, ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಗಳಿಸಿದ ಶ್ರೇಯ ಸೇರಿದಂತೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಕೊಹ್ಲಿ, ಮುಂದಿನ ತಿಂಗಳು ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.