ಚೆನ್ನೈ: ಕ್ರಿಕೆಟ್‌ನಿಂದ ಬಹುತೇಕ ದೂರ ಉಳಿದಿರುವ ಬ್ಯಾಟರ್ ಮುರಳಿ ವಿಜಯ್ ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
61 ಟೆಸ್ಟ್‌ಗಳು, 17 ಏಕದಿನ ಮತ್ತು 9 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಬಲಗೈ ಬ್ಯಾಟರ್ ಡಿಸೆಂಬರ್ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ದೇಶಕ್ಕಾಗಿ ಆಡಿದ್ದರು.
2008-09ರಲ್ಲಿ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯ ಮುರಳಿ ವಿಜಯ್ ಅವರ ಚೊಚ್ಚಲ ಪಂದ್ಯವಾಗಿತ್ತು. ಗೌತಮ್ ಗಂಭೀರ್‌ಗೆ ಬದಲಿಯಾಗಿ ಅವರು ಆ ಟೆಸ್ಟ್‌ನಲ್ಲಿ ಆಡಿದ್ದರು.
ಅವರು 2019ರ ಅಂತ್ಯದಲ್ಲಿ ತಮಿಳುನಾಡು ಪರ ಪ್ರಥಮ ದರ್ಜೆ ಮತ್ತು ‘ಲಿಸ್ಟ್ ಎ’ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ವೃತ್ತಿಪರ ಕ್ರಿಕೆಟ್‌ಗೆ ಸಂಬಂಧಿಸಿದಂತೆ, 2020ರಲ್ಲಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದರು.
‘ಇಂದು, ಕೃತಜ್ಞತೆ, ವಿನಮ್ರತೆಯೊಂದಿಗೆ ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ವಿಜಯ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
‘ಕ್ರಿಕೆಟ್ ಜಗತ್ತಿನ ವ್ಯಾವಹಾರಿಕ ಆಯಾಮವನ್ನೂ ಒಳಗೊಂಡಂತೆ ಅದರಲ್ಲಿನ ಹೊಸ ಅವಕಾಶಗಳನ್ನು ನಾನು ಅನ್ವೇಷಿಸುತ್ತಿದ್ದೇನೆ. ನಾನು ಇಷ್ಟಪಡುವ ಕ್ರೀಡೆಯ ಹೊಸ ಮತ್ತು ವಿಭಿನ್ನ ಪರಿಸರದಲ್ಲಿ ತೊಡಗಿಸಿಕೊಳ್ಳಲಿದ್ದೇನೆ ಎಂದು ಘೋಷಿಸಲು ಉತ್ಸುಕನಾಗಿದ್ದೇನೆ’ ಎಂದು 38 ವರ್ಷದ ವಿಜಯ್ ಹೇಳಿದ್ದಾರೆ.
‘ಕ್ರಿಕೆಟಿಗನಾಗಿ ಇದು ನನ್ನ ಪ್ರಯಾಣದ ಮುಂದಿನ ಹೆಜ್ಜೆ ಎಂದು ನಂಬುತ್ತೇನೆ. ನನ್ನ ಜೀವನದ ಹೊಸ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ‘ ಎಂದು ಅವರು ತಿಳಿಸಿದ್ದಾರೆ.
‘ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ತಮಿಳುನಾಡು ಕ್ರಿಕೆಟ್ ಸಂಸ್ಥೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ‘ಚೆಂಪ್ಲಾಸ್ಟ್ ಸನ್ಮಾರ್’ ಸಂಸ್ಥೆ ನನಗೆ ನೀಡಿದ ಅವಕಾಶಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.
61 ಟೆಸ್ಟ್‌ಗಳಲ್ಲಿ, ವಿಜಯ್ 38.28 ಸರಾಸರಿಯಲ್ಲಿ 3,982 ರನ್‌ಗಳನ್ನು ಗಳಿಸಿದ್ದಾರೆ. 167 ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಅವರು 12 ಶತಕಗಳು ಮತ್ತು 15 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
17 ಏಕದಿನ ಪಂದ್ಯಗಳ ಮೂಲಕ ಅವರು 339 ರನ್ ಮತ್ತು ಏಳು ಟಿ20ಗಳಲ್ಲಿ 169 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಅವರು ಸಿಎಸ್‌ಕೆ ಪರ 2010ರ ಋತುವಿನಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 458 ರನ್ ಗಳಿಸಿದ್ದರು. ಚೆನ್ನೈನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗಳಿಸಿದ್ದ ಸ್ಫೋಟಕ 127ರನ್ ಕೂಡ ಇದರಲ್ಲಿ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.