ನವದೆಹಲಿ: ಜೂನ್ 30ರಂದು ಇಂಗ್ಲೆಂಡ್ ತಂಡದವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಕಿತ್ತಳೆ ಬಣ್ಣದ ಜೆರ್ಸಿ ಧರಿಸಿ ಆಡಲಿದೆ.
ಐಸಿಸಿ ನಿಯಮಗಳ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ಹೊರತು ಪಡಿಸಿ ಇನ್ನುಳಿದ ಎಲ್ಲ ತಂಡಗಳಿಗೆ ಎರಡು ಬಣ್ಣದ ಜೆರ್ಸಿ ನೀಡಲಾಗಿದೆ.
ಪಂದ್ಯದಲ್ಲಿ ಎರಡು ತಂಡಗಳು ಬೇರೆ ಬೇರೆ ಬಣ್ಣದ ಜೆರ್ಸಿ ಧರಿಸಿ ಆಡಬೇಕಿದೆ. ಪಂದ್ಯ ಆರಂಭವಾಗುವುದಕ್ಕೆ ಮುನ್ನವೇ ಯಾವ ಬಣ್ಣದ ಜೆರ್ಸಿ ಧರಿಸಬೇಕು ಎಂದು ತಂಡಗಳಿಗೆ ತಿಳಿಸಲಾಗುವುದು.ಇಂಗ್ಲೆಂಡ್ ತಂಡದ ಜೆರ್ಸಿ ಬಣ್ಣನೀಲಿ ಆಗಿರುವುದರಿಂದ ಈ ಒಂದು ಪಂದ್ಯವನ್ನಾಡುವಾಗ ಭಾರತೀಯ ತಂಡ ಕಿತ್ತಳೆ ಬಣ್ಣದ ಜೆರ್ಸಿ ಧರಿಸಲಿದೆ.
ವಿರೋಧ ವ್ಯಕ್ತ ಪಡಿಸಿದ ಕಾಂಗ್ರೆಸ್, ಸಮಾಜವಾದಿ ಪಕ್ಷದ ಸಂಸದರು
ಟೀಂ ಇಂಡಿಯಾ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಆಡುವುದಕ್ಕೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ವಿರೋಧ ವ್ಯಕ್ತಪಡಿಸಿದೆ.
ಟೀಂ ಇಂಡಿಯಾಗೆ ಈ ಬಣ್ಣದ ಜೆರ್ಸಿ ನೀಡಿದ್ದನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರು ಖಂಡಿಸಿದ್ದಾರೆ.
ಕಿತ್ತಳೆ ಬಣ್ಣದ ಜೆರ್ಸಿ ತೊಡುವುದನ್ನು ಖಂಡಿಸಿದ ಸಮಾಜವಾದಿ ಪಕ್ಷದ ಶಾಸಕ ಅಬು ಅಸೀಂ ಆಜ್ಮಿ, ಐಸಿಸಿಯ ನಿರ್ಧಾರದ ಹಿಂದೆ ಭಾರತ ಸರ್ಕಾರದ ಕೈವಾಡವಿದೆ. ದೇಶವನ್ನು ಕೇಸರೀಕರಣ ಮಾಡವ ಹುನ್ನಾರ ಇದು ಎಂದಿದ್ದಾರೆ.
ಮೋದಿ ಇಡೀ ದೇಶವನ್ನು ಕೇಸರೀಕರಣ ಮಾಡಲು ಬಯಸುತ್ತಾರೆ. ದೇಶದ ತ್ರಿವರ್ಣ ಧ್ವಜದ ವಿನ್ಯಾಸ ಮಾಡಿದ್ದು ಒಬ್ಬ ಮುಸ್ಲಿಂ.ತ್ರಿವರ್ಣ ಧ್ವಜದಲ್ಲಿ ಬೇರೆ ಬಣ್ಣಗಳೂ ಇವೆ. ಕಿತ್ತಳೆ ಬಣ್ಣವನ್ನೇ ಯಾಕೆ ಆಯ್ಕೆ ಮಾಡಬೇಕು? ಜೆರ್ಸಿ ಬಣ್ಣವೂ ತ್ರಿವರ್ಣ ಧ್ವಜದ್ದೇ ಆಗಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ ಆಜ್ಮಿ.
ಈ ಹೇಳಿಕೆಯನ್ನು ಅನುಮೋದಿಸಿದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ನಸೀಂ ಖಾನ್, ಮೋದಿ ಕೇಸರಿ ರಾಜಕಾರಣ ಮಾಡುತ್ತಿದ್ದಾರೆ. ಮೋದಿ ಅಧಿಕಾರಕ್ಕೇರಿದಂದಿನಿಂದ ಅವರು ಕೇಸರಿ ರಾಜಕಾರಣದಲ್ಲಿ ತೊಡಗಿದ್ದಾರೆ.ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಬೇಕು ಮತ್ತು ರಾಷ್ಟ್ರದಲ್ಲಿ ಸಾಮರಸ್ಯವನ್ನು ಪ್ರೋತ್ಸಾಹಿಸಬೇಕು. ಈ ಸರ್ಕಾರ ಎಲ್ಲವನ್ನೂ ಕೇಸರೀಕರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತ ಆರೆಂಜ್ ಜೆರ್ಸಿ ಬಗೆಗನ ಟೀಕೆಗಳಿಗೆ ಪ್ರತಿಕ್ರಿಯಿಸಿದಕೇಂದ್ರ ಸಚಿವ ರಾಮದಾಸ್ ಅಠಾವಳೆ, ಇದು ಧೈರ್ಯ ಮತ್ತು ವಿಜಯದ ಬಣ್ಣ. ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಬಾರದು ಎಂದಿದ್ದಾರೆ.
ಭಾರತದ ಜೆರ್ಸಿ ಕೇಸರಿ ಅಲ್ಲ ಕಿತ್ತಳೆ ಬಣ್ಣ
ಹಲವರು ಈ ಎರಡು ಬಣ್ಣಗಳು ಒಂದೇ ಒಂದು ತಿಳಿದುಕೊಂಡಿದ್ದಾರೆ.ರಾಷ್ಟ್ರಧ್ವಜದಲ್ಲಿರುವ ಬಣ್ಣ ಕೇಸರಿ, ಭಾರತದ ಜೆರ್ಸಿ ಬಣ್ಣ ಕಿತ್ತಳೆ.ಈ ಎರಡೂ ಬಣ್ಣಗಳಿಗಿರುವ ವ್ಯತ್ಯಾಸ ಹೀಗಿದೆ.
ಐಸಿಸಿ ಹೇಳಿದ್ದೇನು?
ಟೀಂಗೆ ಇಷ್ಟವಾಗುವ ಬಣ್ಣವನ್ನು ಆಯ್ಕೆ ಮಾಡಲು ಬಿಸಿಸಿಐಗೆ ಅಧಿಕಾರವಿರುತ್ತದೆ.ನೀಲಿ ಬಣ್ಣ ಇಂಗ್ಲೆಂಡ್ ಟೀಂ ಧರಿಸಿರುವುದರಿಂದ ಭಾರತ ಅದೇ ಬಣ್ಣ ಧರಿಸುವಂತಿಲ್ಲ.
ಆರೆಂಜ್ ಬಣ್ಣ ಡಿಸೈನ್‌ನ್ನು ಭಾರತದ ಹಳೆಯ ಟಿ20 ಜೆರ್ಸಿಯಿಂದ ತೆಗೆದುಕೊಳ್ಳಲಾಗಿದೆ.ಅಮೆರಿಕದಲ್ಲಿರುವ ವಿನ್ಯಾಸಗಾರರು ಇದರ ಡಿಸೈನ್ ಮಾಡಿದ್ದು, ಈಗಾಗಲೇ ಇರುವ ಬಣ್ಣವೊಂದನ್ನು ಆಯ್ಕೆ ಮಾಡಿದ್ದಾರೆ. ಹೊಸತಾದ ಬಣ್ಣವನ್ನು ಆಯ್ಕೆ ಮಾಡುವ ಮೂಲಕ ಅಭಿಮಾನಿಗಳಿಗೆ ಗೊಂದಲವುಂಟಗಾಬಾರದು ಎಂಬ ಆಶಯವೂ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.