ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಅವರ ಮಗಳು ಅನ್ಶಾ ಅವರೊಂದಿಗಿನ ತಮ್ಮ ವಿವಾಹದ ಚಿತ್ರ, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿರುವುದಕ್ಕೆ ವೇಗದ ಬೌಲರ್ ಶಾಹೀನ್ ಷಾ ಅಫ್ರಿದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಹೀನ್ ಅಫ್ರಿದಿ ಮತ್ತು ಅನ್ಶಾ ಅವರ ವಿವಾಹ ಕಳೆದ ಶುಕ್ರವಾರ ನಡೆದಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸೇರಿದಂತೆ ಹಲವರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರಾದರೂ, ಮದುವೆಯ ವಿಡಿಯೊ, ಫೋಟೊಗಳು ಹೊರ ಜಗತ್ತಿಗೆ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ.
ಹೀಗಿದ್ದೂ, ಮದುವೆಯ ವಿಡಿಯೊ, ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಾಹೀನ್ ಅಫ್ರಿದಿ, ‘ಹಲವಾರು ಬಾರಿ ಮಾಡಿದ ವಿನಂತಿಗಳ ಹೊರತಾಗಿಯೂ, ನಮ್ಮ ಗೌಪ್ಯತೆಗೆ ಧಕ್ಕೆಯುಂಟಾಗಿದೆ. ಜನರು ಯಾವುದೇ ಅಂಜಿಕೆ ಇಲ್ಲದೇ ನಮ್ಮ ಫೋಟೊಗಳನ್ನು, ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದು ತುಂಬಾ ನಿರಾಸೆಯಾಗಿದೆ. ನಮಗೆ ಸಹಕಾರ ನೀಡಿ. ನಮ್ಮ ಸ್ಮರಣೀಯ ದೊಡ್ಡ ದಿನವನ್ನು ಹಾಳುಮಾಡಲು ಪ್ರಯತ್ನಿಸಬೇಡಿ ಎಂದು ನಾನು ಮತ್ತೊಮ್ಮೆ ವಿನಮ್ರವಾಗಿ ವಿನಂತಿಸುತ್ತೇನೆ’ ಎಂದು ಹೇಳಿದ್ದಾರೆ.
ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಜತೆಗಿನ ತಮ್ಮ ಮಗಳ ವಿವಾಹದ ಫೋಟೊವನ್ನು ಶಾಹೀದ್ ಅಫ್ರಿದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರಾದರೂ, ಮಗಳ ಮುಖ ಕಾಣದಂತೆ ಎಚ್ಚರ ವಹಿಸಿದ್ದರು.
ಶಾಹೀನ್ ಅಫ್ರಿದಿ ಕೂಡ ಮದುವೆ ಚಿತ್ರಗಳನ್ನು ಹಂಚಿಕೊಂಡಿದ್ದರು. ಅತಿಥಿಗಳು, ಸ್ನೇಹಿತರು ಮದುವೆ ಸಮಾರಂಭಕ್ಕೆ ಬಂದ ಚಿತ್ರಗಳನ್ನು ಮಾತ್ರವೇ ಅವರು ಪೋಸ್ಟ್ ಮಾಡಿದ್ದರು. ವಧುವಿನ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಂಡಿದ್ದರು. ಇಷ್ಟಾದರೂ ಜೋಡಿಯ ಫೋಟೊಗಳು, ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವುದು ಅವರ ಬೇಸರಕ್ಕೆ ಕಾರಣವಾಗಿದೆ.
‘ಮಗಳೆಂದರೆ ಸುಂದರ ಹೂ’
ಶಾಹೀನ್ ಅಫ್ರಿದಿ ಜತೆಗಿನ ಮಗಳ ವಿವಾಹದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಶಾಹೀದ್ ಅಫ್ರಿದಿ ಅದಕ್ಕೊಂದು ಭಾವನಾತ್ಮಕ ಟಿಪ್ಪಣಿಯನ್ನೂ ಬರೆದಿದ್ದರು.
‘ಮಗಳೆಂದರೆ ಉದ್ಯಾನದ ಅತ್ಯಂತ ಸುಂದರವಾದ ಹೂವು. ಏಕೆಂದರೆ ಆ ಹೂ ಆಶೀರ್ವಾದಗಳೊಂದಿಗೆ ಅರಳಿರುತ್ತದೆ. ನಿಮ್ಮ ನಗು, ನೀವು ಕಾಣುವ ಕನಸು ಮತ್ತು ನಿಮ್ಮ ಹೃದಯದ ಪ್ರೀತಿಯೇ ಮಗಳು. ಅಪ್ಪನಾಗಿ, ನಾನು ನನ್ನ ಮಗಳನ್ನು ನಿಕ್ಕಾದಲ್ಲಿ ಶಾಹೀನ್ ಅಫ್ರಿದಿಗೆ ನೀಡಿದ್ದೇನೆ. ಅವರಿಬ್ಬರಿಗೆ ಅಭಿನಂದನೆಗಳು’ ಎಂದು ಅಫ್ರಿದಿ ಬರೆದಿದ್ದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.