ADVERTISEMENT

ನಿವೃತ್ತಿಯಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್‌ ನಿರ್ಧಾರ ಟೀಕಿಸಿದ ಟಿಮ್ ಪೇನ್

ಪಿಟಿಐ
Published 19 ಆಗಸ್ಟ್ 2023, 14:04 IST
Last Updated 19 ಆಗಸ್ಟ್ 2023, 14:04 IST
ಟಿಮ್ ಪೇನ್
ಟಿಮ್ ಪೇನ್   

ಸಿಡ್ನಿ : ನಿವೃತ್ತಿ ಹಿಂಪಡೆದು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಗೆ ಮರಳುತ್ತಿರುವ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್‌ ನಿರ್ಧಾರವನ್ನು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೇನ್ ಟೀಕಿಸಿದ್ದಾರೆ.

ಹೋದ ವರ್ಷದ ಜುಲೈನಲ್ಲಿ ಸ್ಟೋಕ್ಸ್ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ‘ಮೂರು ಮಾದರಿಗಳಲ್ಲಿಯೂ ಆಡುವುದರಿಂದ ಸ್ಥಿರವಾದ ಪ್ರದರ್ಶನ ನೀಡುವುದು ಸಾಧ್ಯವಾಗುತ್ತಿಲ್ಲ‘ ಎಂದಿದ್ದರು. ಇತ್ತೀಚೆಗೆ ಅವರು ತಮ್ಮ ನಿರ್ಧಾರ ಬದಲಿಸಿ, ಇದೇ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದರು.

ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲಿರುವ ಇಂಗ್ಲೆಂಡ್ ತಂಡದ 15 ಆಟಗಾರರಲ್ಲಿ ಸ್ಟೋಕ್ಸ್‌ ಸ್ಥಾನ ಪಡೆದಿದ್ದಾರೆ.

ADVERTISEMENT

‘ಬೆನ್ ಸ್ಟೋಕ್ಸ್‌ ಏಕದಿನ ಕ್ರಿಕೆಟ್‌ ನಿವೃತ್ತಿ ನಿರ್ಧಾರವನ್ನು ಹಿಂಪಡೆಯುತ್ತಿರುವ ವಿದ್ಯಮಾನವು ನನ್ನಲ್ಲಿ ಆಸಕ್ತಿ ಮೂಡಿಸಿದೆ‘ ಎಂದು ಪೇನ್ ಅವರು ಸೆನ್ ರೇಡಿಯೊಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಇದರಲ್ಲಿ ಒಂಚೂರು ಬರೀ ನಾನು, ನನ್ನದು ಎಂಬ ಭಾವ ಕಾಣುತ್ತಿದೆಯಲ್ಲವೇ? ತಮಗೆ ಯಾವಾಗ ಆಡಬೇಕು ಅನಿಸುತ್ತೋ ಆಡುವುದು, ಬೇಡವಾದಾಗ ವಿದಾಯ ಹೇಳುವುದು. ದೊಡ್ಡ ಟೂರ್ನಿಗಳಲ್ಲಿ ಆಡುವುದಾಗಿ ಹೇಳುವುದು, ಉಳಿದದ್ದರಲ್ಲಿ ಹಿಂದೆ ಸರಿಯುವುದು ಎಷ್ಟರ ಮಟ್ಟಿಗೆ ಸರಿ‘ ಎಂದು ಪೇನ್ ಪ್ರಶ್ನಿಸಿದ್ದಾರೆ. 

‘ಸ್ಟೋಕ್ಸ್‌ ಪುನರಾಗಮನದಿಂದ ಇನ್ನೊಬ್ಬರಿಗೆ ಅವಕಾಶ ತಪ್ಪುತ್ತದೆ. ಇವರ ಅನುಪಸ್ಥಿತಿಯಲ್ಲಿ ಕಳೆದ 12 ತಿಂಗಳುಗಳಿಂದ ಕಷ್ಟಪಟ್ಟು ಆಡಿರುವ ಆಟಗಾರರ ಪರಿಸ್ಥಿತಿ ಏನು‘ ಎಂದೂ ಪೇನ್ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.