ಮೂರು ದಿನಗಳ ಹಿಂದೆ (ಅಕ್ಟೋಬರ್ 24) ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಐಪಿಎಲ್ ಪಂದ್ಯ ನೋಡಿದವರೆಲ್ಲಾ ಕುರುಚಲು ಗಡ್ಡದ ಆ ಬೌಲರ್‌ನ ಸ್ಪಿನ್ ಮಾಂತ್ರಿಕತೆಗೆ ಮಾರು ಹೋಗಿದ್ದರು.
ರವಿಚಂದ್ರನ್ ಅಶ್ವಿನ್ ಮತ್ತು ಸುನಿಲ್ ನಾರಾಯಣ ಅವರಂತಹ ಅನುಭವಿ ಸ್ಪಿನ್ನರ್‌ಗಳೇ ವಿಕೆಟ್ ಉರುಳಿಸಲು ಪರದಾಡಿದ್ದ ಆ ಪಿಚ್‌ನಲ್ಲಿ 29 ವರ್ಷ ವಯಸ್ಸಿನ ಆ ಬೌಲರ್ ದೂಸ್ರಾ, ಫ್ಲಿಪ್ಪರ್ ಹಾಗೂ ಗೂಗ್ಲಿ ಎಸೆತಗಳನ್ನು ಪ್ರಯೋಗಿಸಿ ಡೆಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. ಐದು ವಿಕೆಟ್‌ಗಳ ಗೊಂಚಲನ್ನು ಬುಟ್ಟಿಗೆ ಹಾಕಿಕೊಂಡು ಕೆಕೆಆರ್ ಪಾಳಯದಲ್ಲಿ ಗೆಲುವಿನ ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿದ್ದರು.
ಅಂದು ಪಂದ್ಯಶ್ರೇಷ್ಠ ಗೌರವ ಪಡೆದ ಆ ಬೌಲರ್‌ನ ಹೆಸರು ವರುಣ್ ಚಕ್ರವರ್ತಿ.
ತಮಿಳುನಾಡಿನ ತಂಜಾವೂರಿನವರಾದ ವರುಣ್, ಎಳವೆಯಿಂದಲೇ ಕ್ರಿಕೆಟ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಕಂಡವರು. ಕಠಿಣ ಪರಿಶ್ರಮದ ಮೂಲಕ ಅಂದುಕೊಂಡಿದ್ದನ್ನು ಸಾಧಿಸಿರುವ ಅವರು ಈಗ ಅದೆಷ್ಟೊ ಯುವ ಮನಸುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.
ಮೊದಲು ವಿಕೆಟ್ ಕೀಪರ್, ನಂತರ ಮಧ್ಯಮ ವೇಗಿ, ಈಗ ಸ್ಪಿನ್ನರ್..
13ನೇ ವಯಸ್ಸಿನಲ್ಲಿ (ಶಾಲಾ ಹಂತದಲ್ಲಿ) ವಿಕೆಟ್ ಕೀಪರ್ ಆಗಿ ಕ್ರಿಕೆಟ್ ಪಯಣ ಶುರುಮಾಡಿದ ವರುಣ್, 17ನೇ ವಯಸ್ಸಿನಲ್ಲೇ ಈ ಆಟದಿಂದ ದೂರ ಸರಿದಿದ್ದರು.
ವಾಸ್ತುಶಿಲ್ಪ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ನಿರ್ಧರಿಸಿದ್ದ ಅವರು ಕಾಲೇಜಿಗೆ ಅಡಿ ಇಟ್ಟ ನಂತರ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ವಿಮುಖರಾದರು. ಎರಡು ವರ್ಷ ಖಾಸಗಿ ಕಂಪನಿಯೊಂದರಲ್ಲಿ ಕೆಲಸವನ್ನೂ ಮಾಡಿದರು. ಅಲ್ಲಿ ಸಿಗುತ್ತಿದ್ದ ಸಂಬಳದಿಂದ ಜೀವನ ನಿರ್ವಹಣೆ ಕಷ್ಟ ಎಂಬುದು ಅರಿವಾದ ಕೂಡಲೇ ಆ ಕೆಲಸ ಬಿಟ್ಟು ಮತ್ತೆ ಕ್ರಿಕೆಟ್ ಅಂಗಳದತ್ತ ಮುಖಮಾಡಿದರು. ಕ್ರೊಂಬೆಸ್ಟ್ ಕ್ಲಬ್ ಸೇರಿದ ಅವರು ತಂಡದಲ್ಲಿ ಮಧ್ಯಮ ವೇಗದ ಬೌಲರ್‌ನ ಪಾತ್ರ ನಿಭಾಯಿಸುತ್ತಿದ್ದರು. ಪಂದ್ಯವೊಂದರ ವೇಳೆ ಮಂಡಿಗೆ ಗಾಯವಾದ ಬಳಿಕ ಅವರ ಬದುಕು ಬದಲಾಯಿತು!
ಗಾಯದಿಂದ ಗುಣಮುಖರಾದ ನಂತರ ಅವರು ಹೊರಳಿದ್ದು ಸ್ಪಿನ್ ಬೌಲಿಂಗ್‌ನತ್ತ. ಟೆನಿಸ್ ಚೆಂಡಿನಲ್ಲಿ ಅಭ್ಯಾಸ ಮಾಡುತ್ತಾ ಹೊಸ ಹೊಸ ಕೌಶಲಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಂಡು ಸಾಗಿದ ಅವರಿಗೆ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಮೂಲಕ ಅವಕಾಶದ ಬಾಗಿಲು ತೆರೆಯಿತು.
ಟಿಎನ್‌ಪಿಎಲ್‌ನಿಂದ ಐಪಿಎಲ್‌ಗೆ..
2018ರ ಟಿಎನ್‌ಪಿಎಲ್‌ನಲ್ಲಿ ಮಧುರೈ ಪ್ಯಾಂಥರ್ಸ್ ಪರ ಕಣಕ್ಕಿಳಿದಿದ್ದ ವರುಣ್, 240 ಎಸೆತಗಳನ್ನು ಹಾಕಿದ್ದರು. ಈ ಪೈಕಿ 125 ಎಸೆಗಳು ಡಾಟ್ ಆಗಿದ್ದವು. ಆ ಆವೃತ್ತಿಯಲ್ಲಿ ಒಂಬತ್ತು ವಿಕೆಟ್‌ಗಳನ್ನೂ ಉರುಳಿಸಿದ್ದ ಅವರು ಎಲ್.ಶಿವರಾಮಕೃಷ್ಣನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ (ಸಿಎಸ್‌ಕೆ) ಮೈಕ್ ಹಸ್ಸಿ ಅವರ ಕಣ್ಣಿಗೆ ಬಿದ್ದರು.
ವರುಣ್ ಚಮತ್ಕಾರಕ್ಕೆ ಮಾರು ಹೋಗಿದ್ದ ಮೈಕ್ ಹಸ್ಸಿ, ಸಿಎಸ್‌ಕೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ನೀಡಿದ್ದರು. ಇದನ್ನು ಚೆನ್ನಾಗಿಯೇ ಬಳಸಿಕೊಂಡ ವರುಣ್, ಅಭ್ಯಾಸದ ವೇಳೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನೇ ತಬ್ಬಿಬ್ಬುಗೊಳಿಸಿ ಎಲ್ಲರ ಗಮನ ಸೆಳೆದಿದ್ದರು.
ಹರಾಜಿನಲ್ಲಿ ಕುದುರಿದ ಬೇಡಿಕೆ..
2019ರಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ವರುಣ್ ಹೆಸರು ಪ್ರಸ್ತಾಪವಾದೊಡನೆಯೇ ಅವರನ್ನು ಖರೀದಿಸಲು ಫ್ರಾಂಚೈಸ್‌ಗಳು ಜಿದ್ದಿಗೆ ಬಿದ್ದಿದ್ದವು. ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಸಿಎಸ್‌ಕೆ, ನಾ ಮುಂದು ತಾ ಮುಂದೆ ಎನ್ನುತ್ತಾ ಬಿಡ್ ಏರಿಸುತ್ತಲೇ ಹೋದವು. ಹೀಗಾಗಿ ₹20 ಲಕ್ಷ ಮೂಲಬೆಲೆ ಹೊಂದಿದ್ದ ವರುಣ್ ಅವರ ಮೌಲ್ಯ ₹8.4 ಕೋಟಿಗೆ ತಲುಪಿತ್ತು. ಕೊನೆಗೆ ಅವರು ಕಿಂಗ್ಸ್ ಇಲೆವನ್ ಪಾಲಾಗಿದ್ದರು.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ವರುಣ್ ಮೊದಲ ಪಂದ್ಯದಲ್ಲೇ ಹೆಚ್ಚು ದಂಡನೆಗೆ ಒಳಗಾಗಿದ್ದರು. ನಂತರ ಭುಜದ ನೋವಿಗೆ ಒಳಗಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಈ ಬಾರಿಯ ಲೀಗ್‌ಗೂ ಮುನ್ನ ಕಿಂಗ್ಸ್ ಇಲೆವನ್ ತಂಡ ವರುಣ್ ಅವರನ್ನು ಕೈಬಿಟ್ಟಿತ್ತು. ಕಿಂಗ್ಸ್‌ಗೆ ಬೇಡವಾಗಿದ್ದ ವರುಣ್ ಅವರನ್ನು ಕೆಕೆಆರ್ ಅಪ್ಪಿಕೊಂಡಿತು. ಈ ಬಾರಿಯ ಹರಾಜಿನಲ್ಲಿ ಕೆಕೆಆರ್ ಫ್ರಾಂಚೈಸ್ ₹4 ಕೋಟಿ ನೀಡಿ ಅವರನ್ನು ಖರೀದಿಸಿತ್ತು.
ಫ್ರಾಂಚೈಸ್‌ನ ನಂಬಿಕೆಯನ್ನು ವರುಣ್ ಹುಸಿಮಾಡಲಿಲ್ಲ. ಈ ಬಾರಿ 11 ಪಂದ್ಯಗಳನ್ನು(ಅ.26ರ ಅಂತ್ಯಕ್ಕೆ) ಆಡಿರುವ ಅವರು 23.50ರ ಸರಾಸರಿಯಲ್ಲಿ 12 ವಿಕೆಟ್ ಉರುಳಿಸಿದ್ದಾರೆ. ಪಂದ್ಯವೊಂದರಲ್ಲಿ ಉತ್ತಮ ಬೌಲಿಂಗ್ ಸಾಧನೆ (20ಕ್ಕೆ5) ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
‘ನಾನು ಕ್ರಿಕೆಟ್ ಬಿಟ್ಟರೂ ಕ್ರಿಕೆಟ್ ನನ್ನನ್ನು ಬಿಡಲಿಲ್ಲ’ ಎನ್ನುವ ವರುಣ್, ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸುವ ಕನಸು ಕಾಣುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.