ADVERTISEMENT

PAK vs ENG ಅಂತಿಮ ಟೆಸ್ಟ್‌: ಇಂಗ್ಲೆಂಡ್ ಪರದಾಟ

ಪಾಕ್‌ ತಂಡಕ್ಕೆ ನೆರವಾದ ಸಾದ್ ಶಕೀಲ್ ಶತಕ

ಏಜೆನ್ಸೀಸ್
Published 25 ಅಕ್ಟೋಬರ್ 2024, 13:28 IST
Last Updated 25 ಅಕ್ಟೋಬರ್ 2024, 13:28 IST
ಶತಕ ಬಾರಿಸಿದ ಸಾದ್ ಶಕೀಲ್‌
ಎಎಫ್‌ಪಿ ಚಿತ್ರ
ಶತಕ ಬಾರಿಸಿದ ಸಾದ್ ಶಕೀಲ್‌ ಎಎಫ್‌ಪಿ ಚಿತ್ರ   

ರಾವಲ್ಪಿಂಡಿ: ಸಾಜಿದ್‌ ಅಲಿ (14ಕ್ಕೆ1) ಮತ್ತು ನೊಮಾನ್ ಅಲಿ (9ಕ್ಕೆ2) ಅವರ ಸ್ಪಿನ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ, ಮೂರು ಟೆಸ್ಟ್‌ಗಳ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಟೆಸ್ಟ್‌ನಲ್ಲಿ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 24 ರನ್ ಗಳಿಸಿ ಪರದಾಡುತ್ತಿದೆ.

29 ವರ್ಷ ವಯಸ್ಸಿನ ಸಾದ್‌ ಶಕೀಲ್ (134, 223ಎ, 4x5) ಅವರ ಕೆಚ್ಚಿನ ಶತಕದ ಬಲದಿಂದ ಪಾಕಿಸ್ತಾನ ಎರಡನೇ ದಿನವಾದ ಶುಕ್ರವಾರ 77 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಇಂಗ್ಲೆಂಡ್ ತಂಡದ 267 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ 344 ರನ್ ಗಳಿಸಿತು.

ಪಾಕ್ ಒಂದು ಹಂತದಲ್ಲಿ 7 ವಿಕೆಟ್‌ಗೆ 177 ರನ್ ಗಳಿಸಿ ಕುಸಿತದ ಹಾದಿಯಲ್ಲಿತ್ತು. ಆದರೆ ಶಕೀಲ್‌, ಕೆಳಕ್ರಮಾಂಕದ ಆಟಗಾರರ ನೆರವಿನಿಂದ ಮೊತ್ತ ಬೆಳೆಸಿದರಲ್ಲದೇ, ತಂಡಕ್ಕೆ ಉಪಯುಕ್ತ ಮುನ್ನಡೆ ಒದಗಿಸಿದರು. ನೊಮಾನ್ ಅಲಿ (45, 84ಎ) ಜೊತೆ ಎಂಟನೇ ವಿಕೆಟ್‌ಗೆ ಅಮೂಲ್ಯ 88 ರನ್ ಸೇರಿಸಿದರು. ನಂತರ ಸಾಜಿದ್‌ ಖಾನ್ (ಔಟಾಗದೇ 48, 48ಎ, 4x2, 6x4) ಒಡನೆ ಒಂಬತ್ತನೇ ವಿಕೆಟ್‌ಗೆ 72 ರನ್ ಸೇರಿಸಿದ್ದರಿಂದ ಪಾಕಿಸ್ತಾನ ಮುನ್ನಡೆ ಪಡೆಯಲು ಸಾಧ್ಯವಾಯಿತು.

ADVERTISEMENT

ನಂತರ ಸಾಜಿದ್‌, ಆರಂಭ ಆಟಗಾರ ಬೆನ್‌ ಡಕೆಟ್‌ (12) ವಿಕೆಟ್‌ ಪಡೆದರೆ, ನೊಮಾನ್ ಅಲಿ ಐದು ರನ್‌ಗಳ ಅಂತರದಲ್ಲಿ ಜಾಕ್‌ ಕ್ರಾಲಿ (2) ಮತ್ತು ಓಲಿ ಪೋಪ್‌ (1) ಅವರನ್ನು ಪೆವಿಲಿಯನ್‌ಗೆ ಮರಳಿಸಿದರು.

ಮೂರು ಪಂದ್ಯಗಳ ಸರಣಿ 1–1ರಲ್ಲಿ ಸಮನಾಗಿದೆ.

ಸ್ಕೋರುಗಳು: ಇಂಗ್ಲೆಂಡ್‌: 267 ಮತ್ತು 9 ಓವರುಗಳಲ್ಲಿ 3 ವಿಕೆಟ್‌ಗೆ 24 (ನೊಮಾನ್ ಅಲಿ 9ಕ್ಕೆ2); ಪಾಕಿಸ್ತಾನ: 96.4 ಓವರುಗಳಲ್ಲಿ 344 (ಸಾದ್ ಶಖಿಲ್ 134, ನೊಮಾನ್ ಅಲಿ 45, ಸಾಜಿದ್ ಖಾನ್ ಔಟಾಗದೇ 45; ಗಸ್‌ ಅಟ್ಕಿನ್ಸನ್ 22ಕ್ಕೆ2, ಶೋಯೆಬ್ ಬಶೀರ್ 129ಕ್ಕೆ3, ರೆಹಾನ್ ಅಹ್ಮದ್ 66ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.