ADVERTISEMENT

ಪಾಕ್ ತಂಡದಿಂದ ಬಾಬರ್‌ ಕೈಬಿಟ್ಟದ್ದಕ್ಕೆ ಆಕ್ಷೇಪ: ಫಖರ್ ಜಮಾನ್‌ಗೆ PCB ನೋಟಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2024, 15:01 IST
Last Updated 14 ಅಕ್ಟೋಬರ್ 2024, 15:01 IST
<div class="paragraphs"><p>ಫಖರ್ ಜಮಾನ್‌</p></div>

ಫಖರ್ ಜಮಾನ್‌

   

ಪಿಟಿಐ ಚಿತ್ರ

ಲಾಹೋರ್‌: ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ತನ್ನ ಕೇಂದ್ರೀಯ ಗುತ್ತಿಗೆ ಆಟಗಾರ ಫಖರ್‌ ಜಮಾನ್‌ ಅವರಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಶೋಕಾಸ್‌ ನೋಟಿಸ್ ನೀಡಿದೆ.

ADVERTISEMENT

ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಬಾಬರ್‌ ಅಜಂ ಅವರನ್ನು ಪಾಕ್‌ ತಂಡದಿಂದ ಕೈ ಬಿಡಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಮಾನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು.

ಮಂಡಳಿಯ ನಿರ್ಧಾರವನ್ನು ಟೀಕಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದೀರಿ ಎಂದು ಜಮಾನ್‌ಗೆ ನೋಟಿಸ್‌ನಲ್ಲಿ ತಿಳಿಸಲಾಗಿದ್ದು, ಅಕ್ಟೋಬರ್‌ 21ರ ಒಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಲಾಗಿದೆ.

ಬಾಬರ್‌ ಅವರನ್ನು ತಂಡದಿಂದ ಹೊರಗಿಟ್ಟ ಬಗ್ಗೆ ತಮ್ಮ ಎಕ್ಸ್/ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಜಮಾನ್‌, 'ಬಾಬರ್ ಅಜಂ ಅವರನ್ನು ಕೈಬಿಡಲು ನೀಡಿರುವ ಕಾರಣಗಳು ಕಳವಳಕಾರಿಯಾಗಿವೆ. ವಿರಾಟ್‌ ಕೊಹ್ಲಿ ಅವರು 2020 ಮತ್ತು 2023ರ ಅವಧಿಯಲ್ಲಿ ಫಾರ್ಮ್‌ ಕಳೆದುಕೊಂಡಿದ್ದರು. ಅವರ ಬ್ಯಾಟಿಂಗ್‌ ಸರಾಸರಿ ಕ್ರಮವಾಗಿ 19.33, 28.21 ಹಾಗೂ 26.50 ಇತ್ತು. ಆದರೂ ಆಗ ಅವರನ್ನು ಭಾರತ ತಂಡ ಬೆಂಚ್‌ ಕಾಯಿಸಿರಲಿಲ್ಲ. ಪಾಕಿಸ್ತಾನದ ಶ್ರೇಷ್ಠ ಬ್ಯಾಟರ್‌ ಅನ್ನು ಬದಿಗೆ ಸರಿಸಿದರೆ, ತಂಡದಲ್ಲಿ ಕೆಟ್ಟ ಸಂದೇಶ  ರವಾನೆಯಾಗಲಿದೆ. ಸರಿಪಡಿಸಿಕೊಳ್ಳಲು ಈಗಲೂ ಸಮಯವಿದೆ. ನಮ್ಮ ಪ್ರಮುಖ ಆಟಗಾರರನ್ನು ಮೂಲೆಗುಂಪು ಮಾಡುವ ಬದಲು, ರಕ್ಷಿಸಲು ಆದ್ಯತೆ ನೀಡಬೇಕಿದೆ' ಎಂದು ಸಲಹೆ ನೀಡಿದ್ದರು.

ಮೊದಲ ಪಂದ್ಯದಲ್ಲಿ ಸೋಲು
ಇಂಗ್ಲೆಂಡ್‌ ವಿರುದ್ಧ ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಇನಿಂಗ್ಸ್‌ ಹಾಗೂ 47 ರನ್‌ ಅಂತರದ ಸೋಲು ಕಂಡಿತ್ತು.

ಪಾಕ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ 556 ರನ್‌ ಗಳಿಸಿದರೆ, ಇಂಗ್ಲೆಂಡ್‌ 7 ವಿಕೆಟ್‌ಗೆ 823 ರನ್‌ ಗಳಿಸಿತ್ತು. ಪ್ರತಿಯಾಗಿ ಎರಡನೇ ಇನಿಂಗ್ಸ್‌ ಆರಂಭಿಸಿದ ಆತಿಥೇಯ ತಂಡ, ಕೇವಲ 220 ರನ್‌ಗಳಿಗೆ ಸರ್ವಪತನ ಕಂಡಿತ್ತು.

ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಬಾಬರ್‌ ಕ್ರಮವಾಗಿ, 30 ಹಾಗೂ 5 ರನ್‌ ಗಳಿಸಿದ್ದರು.

ಎರಡನೇ ಟೆಸ್ಟ್‌ ನಾಳೆ (ಅಕ್ಟೋಬರ್ 15) ಆರಂಭವಾಗಲಿದೆ. ಬಾಬರ್‌ ಮಾತ್ರವಲ್ಲ, ವೇಗದ ಬೌಲರ್‌ಗಳಾದ ಶಾಹೀನ್‌ ಶಾ ಅಫ್ರಿದಿ ಮತ್ತು ನಸೀಂ ಶಾ ಅವರನ್ನೂ ಆಯ್ಕೆಗೆ ಪರಿಗಣಿಸಿಲ್ಲ. ಗಾಯದ ಸಮಸ್ಯೆಯಿಂದಾಗಿ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿರುವುದಾಗಿ ಪಿಸಿಬಿ ಹೇಳಿದೆ.

ಈ ಟೂರ್ನಿಗೂ ಮುನ್ನ (ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ) ತವರಿನಲ್ಲೇ ನಡೆದ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಪಾಕಿಸ್ತಾನ ಮುಗ್ಗರಿಸಿತ್ತು. ರಾವಲ್ಪಿಂಡಿಯಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸಿತ್ತು.

ಆಗಲೂ ಬಾಬರ್‌ ಬ್ಯಾಟ್‌ ಸದ್ದು ಮಾಡಿರಲಿಲ್ಲ. ಕ್ರಮವಾಗಿ 0, 22, 31 ಹಾಗೂ 11 ರನ್‌ ಮಾತ್ರವೇ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.