ADVERTISEMENT

ಕಾಲಿಗೆ ಬಡಿದ ಚೆಂಡು: ಕೋಪದಿಂದ ಸ್ವೆಟರ್ ಎಸೆದ ಅಂಪೈರ್– ಮಸಾಜ್ ಮಾಡಿದ ಆಟಗಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2023, 6:05 IST
Last Updated 12 ಜನವರಿ 2023, 6:05 IST
   

ಕರಾಚಿ: ಇಲ್ಲಿ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್ ಕೋಪಗೊಂಡು ಆಟಗಾರನೊಬ್ಬನ ಸ್ವೆಟರ್ ಅನ್ನು ಕೋಪದಿಂದ ಎಸೆದ ಅಪರೂಪದ ಘಟನೆ ನಡೆದಿದೆ.

ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ಕ್ರಿಕೆಟ್ ಮೈದಾನದಲ್ಲಿ ಅಂಪೈರ್‌ಗಳು ಅದೆಂತಹ ಸಂದರ್ಭ ಬಂದರೂ ಸಂಯಮ ಕಾಯ್ದುಕೊಳ್ಳುತ್ತಾರೆ. ಆಟಗಾರರ ಅಸಮಾಧಾನ, ಸಿಟ್ಟು, ಬೈಗುಳ.. ಹೀಗೆ ಎಂತಹ ಸಂದರ್ಭದಲ್ಲೂ ಅಂಪೈರ್‌ಗಳು ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ, ಈ ಪಂದ್ಯದಲ್ಲಿ ಆಟಗಾರನೊಬ್ಬ ಎಸೆದ ಚೆಂಡು ಅಂಪೈರ್ ಅಲೀಂ ಧರ್ ಅವರ ಕಾಲಿಗೆ ಬಡಿದು ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ನ್ಯೂಜಿಲೆಂಡ್ ಇನ್ನಿಂಗ್ಸ್‌ನ 36ನೇ ಓವರಿನಲ್ಲಿ ಗ್ಲೆನ್ ಫಿಲಿಪ್ಸ್ ಹೊಡೆದ ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಹಿಡಿದ ಮೊಹಮ್ಮದ್ ವಾಸಿಂ ವೇಗವಾಗಿ ಥ್ರೋ ಮಾಡಿದರು. ದುರಾದೃಷ್ಟವಶಾತ್ ಚೆಂಡು ಅಂಪೈರ್ ಕಾಲಿಗೆ ಬಲವಾಗಿ ಬಡಿಯಿತು. ತೀವ್ರ ನೋವನ್ನು ಅನುಭವಿಸಿದ ಅಲೀಂ ಧರ್ ಕೋಪದಿಂದ ತಮ್ಮ ಕೈಯಲ್ಲಿದ್ದ ಆಟಗಾರನೊಬ್ಬನ ಸ್ವೆಟರ್ ಅನ್ನು ನೆಲಕ್ಕೆ ಎಸೆದರು.

ADVERTISEMENT

ಅಂಪೈರ್‌ಗೆ ಪೆಟ್ಟು ಬಿದ್ದಿರುವುದನ್ನು ಅರಿತ ವೇಗಿ ನಸೀಂ ಶಾ ಹತ್ತಿರ ಬಂದು ಅವರ ಕಾಲಿಗೆ ಮಸಾಜ್ ಮಾಡಿದರು. ಫಿಸಿಯೊ ಸಹ ಮೈದಾನಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು. ಅಲ್ಪ ವಿರಾಮದ ಬಳಿಕ ಪಂದ್ಯ ಮತ್ತೆ ಆರಂಭವಾಯಿತು.

ಈ ಪಂದ್ಯದಲ್ಲಿ ಪಾಕಿಸ್ತಾನ 4 ವಿಕೆಟ್‌ಗಳ ಗೆಲುವು ದಾಖಲಿಸಿತು. ನ್ಯೂಜಿಲೆಂಡ್ ನೀಡಿದ್ದ 255 ರನ್‌ಗಳ ಗುರಿಯನ್ನು ಪಾಕಿಸ್ತಾನ 48.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 258 ಗಳಿಸುವ ಮೂಲಕ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.