ADVERTISEMENT

T20 World Cup: ಪಾಕಿಸ್ತಾನ ವಿರುದ್ಧ 1 ರನ್ ಅಂತರದ ರೋಚಕ ಜಯ ಸಾಧಿಸಿದ ಜಿಂಬಾಬ್ವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2022, 5:04 IST
Last Updated 28 ಅಕ್ಟೋಬರ್ 2022, 5:04 IST
   

ಪರ್ತ್‌:ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ 'ಸೂಪರ್‌ 12' ಹಂತದ ಪಂದ್ಯದಲ್ಲಿಜಿಂಬಾಬ್ವೆ ತಂಡ ಬಲಿಷ್ಠ ಪಾಕಿಸ್ತಾನ ಎದುರು ಒಂದು ರನ್‌ ಅಂತರದ ರೋಚಕ ಜಯ ದಾಖಲಿಸಿದೆ.

ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಪಾಕ್‌ ಬೌಲರ್‌ಗಳ ಕರಾರುವಾಕ್‌ ಬೌಲಿಂಗ್‌ ಎದುರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಅತ್ಯುತ್ತಮವಾಗಿಬೌಲಿಂಗ್‌ ಮಾಡಿದ ಮೊಹಮ್ಮದ್ ವಾಸಿಂ ಜೂನಿಯರ್‌ 4 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದರು. ಅವರಿಗೆ ಸಾಥ್‌ ನೀಡಿದ ಶಾದಬ್ ಖಾನ್‌ 3 ವಿಕೆಟ್‌ ಉರುಳಿಸಿದರೆ, ಹ್ಯಾರಿಸ್‌ ರವೂಫ್‌ ಒಂದು ವಿಕೆಟ್‌ ಕಿತ್ತರು.

ಹೀಗಾಗಿ ಜಿಂಬಾಬ್ವೆ ತಂಡನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 130 ರನ್ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಈ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ 'ಸೊನ್ನೆ' ಸುತ್ತಿದ್ದನಾಯಕ ಬಾಬರ್‌ ಅಜಂ (4) ಮತ್ತೊಮ್ಮೆ ವಿಫಲರಾದರು. ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಮೊಹಮ್ಮದ್ ರಿಜ್ವಾನ್‌ (14) ಕೂಡ ನಿರಾಸೆ ಮೂಡಿಸಿದರು. ಬಳಿಕ ಬಂದ ಇಫ್ತಿಕಾರ್ ಅಹಮದ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ.

ಹೀಗಾಗಿ ಕೇವಲ 36ರನ್‌ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಮತ್ತು ಶಾದಬ್ ಖಾನ್ ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿದರು. ಇವರಿಬ್ಬರು 4ನೇ ವಿಕೆಟ್ ಪಾಲುದಾರಿಕೆಯಲ್ಲಿ 52 ರನ್ ಕೂಡಿಸಿದರು.

ಆದರೆ, 17 ರನ್ ಗಳಿಸಿದ್ದ ಶಾದಬ್ ಔಟಾಗುತ್ತಿದ್ದಂತೆ ಪಾಕ್ ಪಡೆ ಮತ್ತೆ ಕುಸಿಯಲಾರಂಭಿಸಿತು. 6ನೇ ಕ್ರಮಾಂಕದಲ್ಲಿ ಬಂದ ಹೈದರ್‌ ಅಲಿ ಶೂನ್ಯಕ್ಕೆ ಔಟಾದರು. ತಂಡದ ಮೊತ್ತ 94 ರನ್ ಆಗಿದ್ದಾಗ ಶಾನ್ ಮಸೂದ್ (44) ಸಹ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಜಿಂಬಾಬ್ವೆ ಸುಲಭ ಜಯದ ನಿರೀಕ್ಷೆಯಲ್ಲಿತ್ತು.ಆದರೆ, ಪಾಕ್ ಸುಲಭವಾಗಿ ಸೋಲೊಪ್ಪಲಿಲ್ಲ.

ಮೊಹಮ್ಮದ್ ನವಾಜ್ (22) ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ (ಅಜೇಯ 18) ಪ್ರತಿರೋಧ ತೋರಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೇ ಓವರ್‌ನ ಐದನೇಎಸೆತಗಳಲ್ಲಿ ನವಾಜ್‌ ವಿಕೆಟ್‌ ಒಪ್ಪಿಸಿದರು. ಅಂತಿಮಎಸೆತದಲ್ಲಿ ಮೂರು ರನ್ ಬೇಕಿದ್ದಾಗ ಶಾಹಿನ್‌ ಅಫ್ರಿದಿ (1) ಎರಡನೇ ರನ್‌ಗಾಗಿ ಓಡುವ ವೇಳೆ ರನೌಟ್‌ ಆದರು. ಹೀಗಾಗಿ ಪಾಕ್‌ ಪಡೆ 1 ರನ್ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು.

ಪಾಕ್ ಮುಂದಿನ ಹಾದಿ ಕಠಿಣ
ಪಾಕಿಸ್ತಾನ'ಸೂಪರ್‌ 12' ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಕ್ಟೋಬರ್‌ 23ರಂದು ಭಾರತ ವಿರುದ್ಧ ನಡೆದ ಮೊದಲಪಂದ್ಯದಲ್ಲಿ 4 ವಿಕೆಟ್ ಅಂತರದಿಂದ ಸೋಲು ಕಂಡಿತ್ತು.ಹೀಗಾಗಿ ಸೆಮಿಫೈನಲ್‌ ಹಾದಿ ಕಠಿಣವೆನಿಸಿದೆ. ಉಳಿದ ತಂಡಗಳ ಪಂದ್ಯಗಳ ಫಲಿತಾಂಶವು ಪಾಕ್‌ ಪಡೆಯ ಭವಿಷ್ಯವನ್ನು ನಿರ್ಧರಿಸಲಿವೆ.

ಪಾಕಿಸ್ತಾನ ಮುಂದಿನ ಮೂರು ಪಂದ್ಯಗಳನ್ನು ಕ್ರಮವಾಗಿ ನೆದರ್‌ಲೆಂಡ್ಸ್‌ (ಅಕ್ಟೋಬರ್‌ 30), ದಕ್ಷಿಣ ಆಫ್ರಿಕಾ (ನವೆಂಬರ್ 3) ಹಾಗೂ ಬಾಂಗ್ಲಾದೇಶ (ನವೆಂಬರ್ 6) ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.