ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಏಕದಿನ, ಟಿ–20 ಕ್ರಿಕೆಟ್ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ಅವರನ್ನು ನೇಮಕ ಮಾಡಿದೆ.
ಟೆಸ್ಟ್ ಕ್ರಿಕೆಟ್ ತರಬೇತಿಯ ಹೊಣೆಯನ್ನು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲೆಸ್ಪಿ ಅವರಿಗೆ ನೀಡಲಾಗಿದೆ.
2011ರಲ್ಲಿ ಭಾರತ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸಿದಾಗ ಗ್ಯಾರಿ ಕರ್ಸ್ಟನ್ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು.
ಸದ್ಯ, ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ, ಎಲ್ಲ ಮಾದರಿಯ ಕ್ರಿಕೆಟ್‌ಗೆ ಮಾಜಿ ಆಲ್‌ರೌಂಡರ್ ಅಜರ್ ಮೆಹಮ್ಮೂದ್ ಅವರನ್ನು ಸಹಾಯಕ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
ಎರಡು ವರ್ಷದ ಅವಧಿಗೆ ಈ ನೇಮಕಾತಿಗಳನ್ನು ಮಾಡಲಾಗಿದೆ.
‘ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲೆಸ್ಪಿರಂತಹ ಅತ್ಯುತ್ತಮ ತರಬೇತುದಾರರನ್ನು ನೇಮಕ ಮಾಡುವ ಮೂಲಕ ಪಾಕಿಸ್ತಾನ ತಂಡಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ’ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
‘ನಮ್ಮ ತಂಡಕ್ಕೆ ಅತ್ಯುತ್ತಮ ಸೌಲಭ್ಯ ಒದಗಿಸಲು ನಾವು ಬಯಸುತ್ತೇವೆ. ಹಾಗಾಗಿಯೇ, ಗ್ಯಾರಿ ಕರ್ಸ್ಟನ್ ಮತ್ತು ಗಿಲೆಸ್ಪಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವು ನಾಲ್ಕು ಟಿ20 ಪಂದ್ಯಗಳನ್ನು ಆಡಲಿದ್ದು, ಅಲ್ಲಿಂದ ತಂಡವು ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪ್ರಯಾಣಿಸಲಿದೆ.
‘ಆಗಸ್ಟ್‌ನಲ್ಲಿ ನಮ್ಮ ಟೆಸ್ಟ್ ಕ್ರಿಕೆಟ್ ವೇಳಾಪಟ್ಟಿ ಪ್ರಾರಂಭವಾಗುವ ಮೊದಲು ಗಿಲೆಸ್ಪಿ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದರು.
‘ಕರ್ಸ್ಟನ್ ಮತ್ತು ಗಿಲೆಸ್ಪಿ ಎಲ್ಲಾ ಸಮಯದಲ್ಲೂ ಪಾಕಿಸ್ತಾನ ತಂಡದೊಂದಿಗೆ ಲಭ್ಯವಿರುತ್ತಾರೆಯೇ’ ಎಂದು ಪ್ರಶ್ನೆಗೆ, ತರಬೇತುದಾರರು ಹೆಚ್ಚಾಗಿ ತಂಡದೊಂದಿಗೆ ಇರುತ್ತಾರೆ ಮತ್ತು ಒಪ್ಪಂದದ ಪ್ರಕಾರ ತಮ್ಮ ರಜಾದಿನಗಳನ್ನು ತೆಗೆದುಕೊಳ್ಳುತ್ತಾರೆ. ದೇಶೀಯ ಕ್ರಿಕೆಟ್ ಸುಧಾರಣೆಗೆ ಮತ್ತು ಸ್ಥಳೀಯ ತರಬೇತುದಾರರಿಗೆ ಮಾರ್ಗದರ್ಶನ ನೀಡುವರು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.