ಇಸ್ಲಾಮಾಬಾದ್ (ಪಿಟಿಐ): ಐಪಿಎಲ್ ಪಂದ್ಯಗಳ ಪ್ರಸಾರಕ್ಕೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿ ಮಂಗಳವಾರ ಆದೇಶ ಹೊರಡಿಸಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಇಲ್ಲಿನ ಮಾಹಿತಿ ಹಾಗೂ ಪ್ರಸಾರಖಾತೆ ಸಚಿವ ಫವಾದ್ ಚೌಧರಿ ಅವರು ತಿಳಿಸಿದರು. ಇಮ್ರಾನ್‌ಖಾನ್ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದರು.
ಪಾಕಿಸ್ತಾನ ಕ್ರಿಕೆಟ್‌ಗೆ ಯಾವುದೇ ರೀತಿಯಿಂದಲೂ ಹಾನಿ ಉಂಟುಮಾಡದಂತೆ ತಡೆಯುವ ನಿಟ್ಟಿನಲ್ಲಿ ಸಂಪುಟ ಸಭೆಯು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಫವಾದ್ ತಿಳಿಸಿದರು.
‘ಪಾಕಿಸ್ತಾನದ ಕ್ರಿಕೆಟ್ ವ್ಯವಸ್ಥೆಯನ್ನು ಹಾನಿಗೊಳಿಸಲು ಭಾರತ ಸಂಘಟಿತ ಪ್ರಯತ್ನ ನಡೆಸುತ್ತಿದೆ. ಈ ಕಾರಣದಿಂದ ಭಾರತದಲ್ಲಿ ನಡೆಯುವ ದೇಶಿಯ ಕ್ರಿಕೆಟ್ ಅನ್ನು ಪಾಕಿಸ್ತಾನದಲ್ಲಿ ಉತ್ತೇಜಿಸಲು ಅವಕಾಶ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ’ ಎಂದು ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಬಳಿಕ ಪಾಕಿಸ್ತಾನ್ ಸೂಪರ್ ಲೀಗ್‌ನ (ಪಿಎಸ್‌ಎಲ್) ನಾಲ್ಕನೇ ಆವೃತ್ತಿಯ ಪ್ರಸಾರಕ್ಕೆ ಭಾರತದಲ್ಲಿ ಅರ್ಧದಲ್ಲೇ ತಡೆಹಿಡಿಯಲಾಗಿತ್ತು.
ಯೋಧರ ಹತ್ಯೆಯ ಪ್ರತಿಭಟ ನಾರ್ಥವಾಗಿ ಭಾರತದಲ್ಲಿ ಪಿಎಸ್‌ಎಲ್ ಟೂರ್ನಿಯ ವರದಿ ಪ್ರಸಾರದ ಜವಾಬ್ದಾರಿ ಹೊತ್ತಿದ್ದ ‘ಡಿ ಸ್ಪೋರ್ಟ್’ ಕಂಪನಿಯು ಪ್ರಸಾರವನ್ನು ನಿಲ್ಲಿಸಿತ್ತು.
ಪಿಎಸ್‌ಎಲ್ ನೇರಪ್ರಸಾರದ ಜವಾಬ್ದಾರಿ ವಹಿಸಿಕೊಂಡಿದ್ದ ಭಾರತದ ‘ಐಎಂಜಿ ರಿಲಯನ್ಸ್ ಕಂಪನಿ’ ತನ್ನ ಒಪ್ಪಂದದಿಂದ ಏಕಾಏಕಿ ಹಿಂದೆ ಸರಿದಿತ್ತು. ಇದರಿಂದ ಸರಣಿ ಮಧ್ಯದಲ್ಲಿ ಹೊಸ ಕಂಪನಿಯೊಂದನ್ನು ಹುಡುಕಾಡುವ ಪರಿಸ್ಥಿತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಎದುರಾಗಿತ್ತು. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಪಾಕಿಸ್ತಾನ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.