ಬರ್ಮಿಂಗ್‌ಹ್ಯಾಮ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕಿ ಬಿಸ್ಮಾ ಮರೂಫ್ ಅವರ ಮಗುವಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ರೀಡಾಗ್ರಾಮದ ಪ್ರವೇಶಕ್ಕೆ ಅನುಮತಿ ಪತ್ರ ನೀಡಲು ಆಯೋಜಕರು ನಿರಾಕರಿಸಿದ್ಧಾರೆ.
ಜುಲೈ 25ರಿಂದ ಆಗಸ್ಟ್ 8ರವರೆಗೆ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆಗೊಂಡಿದೆ. ಈ ಕೂಟದಲ್ಲಿ ಮಹಿಳೆಯರ ಕ್ರಿಕೆಟ್ ಕೂಡ ನಡೆಯಲಿದೆ. ಇದರಲ್ಲಿ ಪಾಕ್ ತಂಡವು ಆಡಲಿದೆ. ನಾಯಕಿ ಬಿಸ್ಮಾ ಅವರು ತಮ್ಮ11 ತಿಂಗಳ ಹೆಣ್ಣುಮಗು ಫಾತೀಮಾ ಹಾಗೂ ತಾಯಿಗೂ ಕ್ರೀಡಾಗ್ರಾಮದಲ್ಲಿಯೇ ವಾಸ್ತವ್ಯ ಕಲ್ಪಿಸಲು ಮನವಿ ಮಾಡಿದ್ದರು. ಆದರೆ, ಕಾಮನ್‌ವೆಲ್ತ್ ಗೇಮ್ಸ್ ಆಯೋಜಕರು ಒಪ್ಪಿಲ್ಲ. ಇದರಿಂದಾಗಿ ಕ್ರೀಡಾಗ್ರಾಮದ ಹೊರಗೆ ಹೋಟೆಲ್‌ನಲ್ಲಿತಮ್ಮ ತಾಯಿ ಮತ್ತು ಮಗುವಿಗೆ ವಸತಿ ವ್ಯವಸ್ಥೆ ಮಾಡಲು ಬಿಸ್ಮಾ ನಿರ್ಧರಿಸಿದ್ದಾರೆ. ಇದರ ವೆಚ್ಚವನ್ನು ಪಿಸಿಬಿ ಮತ್ತು ಬಿಸ್ಮಾ ಹಂಚಿಕೊಳ್ಳಲಿದ್ದಾರೆನ್ನಲಾಗಿದೆ.
ಈಚೆಗೆ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಿಸ್ಮಾ ಅವರುಪಾಕ್ ತಂಡವನ್ನು ಮುನ್ನಡೆಸಿದ್ದರು. ಆ ಸಂದರ್ಭದಲ್ಲಿ ಐಸಿಸಿಯು ಎಲ್ಲ ರೀತಿಯ ಸೌಲಭ್ಯಗಳನ್ನೂ ನೀಡಿತ್ತು. ತಾಯಿಯು ಮಗು ಮತ್ತು ತಮ್ಮ ಆಯ್ಕೆಯ ಸಹಾಯಕರೊಂದಿಗೆ ಪ್ರಯಾಣಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅವಕಾಶ ನೀಡಿದೆ.
‘ಬಿಸ್ಮಾ ಅವರ ಮಗು ಮತ್ತು ತಾಯಿಗೆ ಕ್ರೀಡಾಗ್ರಾಮದಲ್ಲಿ ವಸತಿ ಸೌಲಭ್ಯ ನೀಡಲು ಕೋರಲಾಗಿತ್ತು. ಆದರೆ, ಆಯೋಜಕರು 22 ಜನರಿಗೆ ಮಾತ್ರ ಸ್ಥಳಾವಕಾಶವಿದೆ. ಅದರಲ್ಲಿ ಇಬ್ಬರನ್ನು ಕಡಿಮೆ ಮಾಡಿದರೆ ಬಿಸ್ಮಾ ಅವರ ತಾಯಿ ಮತ್ತು ಮಗುವಿಗೆ ಸ್ಥಳ ಕಲ್ಪಿಸಬಹುದೆಂದು ಹೇಳಿದರು. ಆದರೆ ತಂಡದಿಂದ ಆಟಗಾರರು ಮತ್ತು ಅಧಿಕಾರಿಗಳನ್ನು ಕೈಬಿಡಲು ಪಿಸಿಬಿ ಒಪ್ಪಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.