ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಬ್ಯಾಟಿಂಗ್ ಕೋಚ್ ಯೂನಿಸ್ ಖಾನ್ ಅವರ ಅವಧಿಯನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್‌ವರೆಗೆ ವಿಸ್ತರಿಸಿದೆ.
ಈ ಬಗ್ಗೆ ಮಾತನಾಡಿರುವ ಪಿಸಿಬಿ ಸಿಇಒ, ವಾಸಿಂ ಖಾನ್, ‘ಯೂನಿಸ್ ನಮ್ಮ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಯಲಿದ್ದಾರೆ ಎಂದು ಹೇಳಲು ಸಂತಸವಾಗುತ್ತಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಯೂನಿಸ್ ಅವರ ಪಾತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದ್ದಾರೆ.
‘ಅವರ ಕೆಲಸದ ನೀತಿ, ಬದ್ಧತೆ ಮತ್ತು ಜ್ಞಾನದ ಬಗ್ಗೆ ಎರಡು ಮಾತಿಲ್ಲ. ಅವರ ನೇಮಕಾತಿಯಿಂದಾಗಿ ಹಲವು ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳಿಗೆ ಪ್ರಯೋಜನವಾಗಲಿದೆ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ.
ಪಾಕಿಸ್ತಾನ ತಂಡದ ಪರ 118 ಟೆಸ್ಟ್ ಪಂದ್ಯಗಳನ್ನು ಆಡಿರುವ ಖಾನ್, 52.06ರ ಸರಾಸರಿಯಲ್ಲಿ 10,099 ರನ್ ಕಲೆಹಾಕಿದ್ದಾರೆ. 265 ಏಕದಿನ ಪಂದ್ಯಗಳಲ್ಲಿ 7,249 ರನ್ ಗಳಿಸಿಕೊಂಡಿರುವ ಅವರು, 23 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದು 442 ರನ್ ಬಾರಿಸಿದ್ದಾರೆ.
2009ರಲ್ಲಿ ಚುಟುಕು ವಿಶ್ವಕಪ್ ಗೆದ್ದ ಪಾಕ್ ತಂಡವನ್ನು ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.