ಕರಾಚಿ: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಬ್ಯಾಕ್ ಟು ಬ್ಯಾಕ್ ಪ್ರವಾಸಕ್ಕೆ ಎರಡು ದಿನ ಬಾಕಿಯಿರುವಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ತರಬೇತುದಾರನ ಸ್ಥಾನಕ್ಕೆ ಮಾಜಿ ನಾಯಕ ಯೂನಿಸ್ ಖಾನ್ ರಾಜೀನಾಮೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
ಜೂನ್ 25 ರಿಂದ ಜುಲೈ 20 ರ ವರೆಗೆ ಇಂಗ್ಲೆಂಡ್ ವಿರುದ್ಧದ 3 ಏಕದಿನ ಮತ್ತು 3 ಟಿ20 ಪಂದ್ಯ ನಿಗದಿಯಾಗಿದೆ. ಬಳಿಕ ಜುಲೈ 21 ರಿಂದ ಆಗಸ್ಟ್ 24ರ ವರೆಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವಿಂಡೀಸ್ ವಿರುದ್ಧ 5 ಟಿ 20 ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ತರಬೇತುದಾರನ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಲು ಮನಸ್ಸಿಲ್ಲ ಆದರೆ ಸ್ನೇಹಪೂರ್ವಕವಾಗಿ ಸ್ವೀಕರಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
'ಬ್ಯಾಟಿಂಗ್ ತರಬೇತುದಾರರಿಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆಗೆ ಯೂನಿಸ್ ಖಾನ್ ಸ್ಥಾನವನ್ನು ಭರ್ತಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಯೂನಿಸ್ ಖಾನ್ ತರಬೇತುದಾರನ ಸ್ಥಾನಕ್ಕೆ ಇದ್ದಕ್ಕಿದ್ದಂತೆ ರಾಜೀನಾಮೆ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ. ತಮ್ಮ ಪ್ರದರ್ಶನದ ಬಗ್ಗೆ ಹಾಗೂ ತಂಡದ ಆಟಗಾರರ ಆಯ್ಕೆ ವಿಚಾರದಲ್ಲಿ ಯೂನಿಸ್ ಖಾನ್ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ತಂಡದ ಬ್ಯಾಟಿಂಗ್ ತರಬೇತುದಾರರಾಗಿ ಯೂನಿಸ್ ಖಾನ್ ಆಯ್ಕೆಯಾಗಿದ್ದರು. 2022ರ ಐಸಿಸಿ ಟಿ20 ವಿಶ್ವಕಪ್ ವರೆಗೆ ತಂಡದ ಕೋಚ್ ಆಗಿ ನೇಮಿಸಲ್ಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.