ನವದೆಹಲಿ: ‘ನಾನೊಬ್ಬನೇ ತಪ್ಪು ಮಾಡಿಲ್ಲ. ನನ್ನಂತೆ ಹಲವರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಅವರಿಗೆಲ್ಲಾ ಎರಡನೇ ಅವಕಾಶ ಸಿಕ್ಕಿದೆ. ನಾನು ಇದರಿಂದ ವಂಚಿತನಾಗಿದ್ದೇನೆ’ ಎಂದು ಪಾಕಿಸ್ತಾನದ ಕಳಂಕಿತ ಕ್ರಿಕೆಟಿಗ ಮೊಹಮ್ಮದ್ ಆಸೀಫ್ ನುಡಿದಿದ್ದಾರೆ.
2010ರಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಗ ನಡೆದಿದ್ದಫಿಕ್ಸಿಂಗ್‌ನಲ್ಲಿಆಸೀಫ್ ಭಾಗಿಯಾಗಿದ್ದರು. ಹಣಕ್ಕಾಗಿ ಅವರು ಕೆಲ ಪಂದ್ಯಗಳಲ್ಲಿ ಬೇಕಂತಲೇ ನೋಬಾಲ್‌ಗಳನ್ನು ಹಾಕಿದ್ದರು. ಇದಕ್ಕಾಗಿ ಇಂಗ್ಲೆಂಡ್‌ನಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು. ಅವರ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಏಳು ವರ್ಷ ನಿಷೇಧ ಹೇರಿತ್ತು.
‘ಎಲ್ಲರೂ ತಪ್ಪು ಮಾಡುತ್ತಾರೆ. ನನ್ನಿಂದಲೂ ಪ್ರಮಾದವಾಗಿದೆ. ನನಗಿಂತ ಮೊದಲು ಅನೇಕರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಅವರೆಲ್ಲಾ ಈಗ ಪಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಪ್ರಕರಣ ಬೆಳಕಿಗೆ ಬದ ಬಳಿಕವೂ ಹಲವರು ಫಿಕ್ಸಿಂಗ್ ನಡೆಸಿದ್ದಾರೆ. ಅವರು ಈಗಲೂ ಕ್ರಿಕೆಟ್ ಆಡುತ್ತಿದ್ದಾರೆ’ ಎಂದು ನುಡಿದಿದ್ದಾರೆ.
‘ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡವರ ಪೈಕಿ ಕೆಲವರನ್ನು ಬಿಟ್ಟು ಉಳಿದವರೆಲ್ಲರಿಗೂ ತಪ್ಪು ತಿದ್ದಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗಿದೆ. ನಾನೊಬ್ಬ ಪ್ರತಿಭಾವಂತ ಬೌಲರ್, ನನ್ನ ವಿಚಾರದಲ್ಲಿ ಪಿಸಿಬಿ ಕೊಂಚವೂ ಕರುಣೆ ತೋರಲಿಲ್ಲ. ಹಾಗಂತ ನಾನು ಆ ಕಹಿ ನೆನಪುಗಳನ್ನು ಕೆದಕುತ್ತಾ ಕೂರುವುದಿಲ್ಲ’ ಎಂದು ತಿಳಿಸಿದ್ದಾರೆ.
‘ನಾನು ಕ್ರಿಕೆಟ್ ಆಡಿದಷ್ಟೂ ವರ್ಷ ಬಿರುಗಾಳಿ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಿದ್ದೆ. ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಈಗಲೂ ನನ್ನನ್ನು ನೆನಪಿಸಿಕೊಳ್ಳುತ್ತಾರೆ. ನನ್ನ ಬೌಲಿಂಗ್ ಅನ್ನು ಕೊಂಡಾಡುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ನಾನು ಮೂಡಿಸಿರುವ ಛಾಪು ಎಂತಹದ್ದು ಎಂಬುದು ಇದರಿಂದ ತಿಳಿಯುತ್ತದೆ’ ಎಂದಿದ್ದಾರೆ.
‘ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಕೆವಿನ್ ಪೀಟರ್ಸನ್, ದಕ್ಷಿಣ ಆಫ್ರಿಕಾದ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್ ಮತ್ತು ಹಾಶೀಂ ಆಮ್ಲಾ ಅವರು ಈಗಲೂ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ. ಅದನ್ನೆಲ್ಲಾ ಕೇಳಿದಾಗ ಹೆಮ್ಮೆಯ ಭಾವು ಮೂಡುತ್ತದೆ’ ಎಂದು 37 ವರ್ಷ ವಯಸ್ಸಿನ ಆಟಗಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.