ADVERTISEMENT

ICC Rankings: ಬಾಂಗ್ಲಾ ವಿರುದ್ಧ ಸರಣಿ ಸೋಲು; 8ನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2024, 11:23 IST
Last Updated 4 ಸೆಪ್ಟೆಂಬರ್ 2024, 11:23 IST
<div class="paragraphs"><p>ಬಾಂಗ್ಲಾದೇಶ ತಂಡದ ಆಟಗಾರರ ಸಂಭ್ರಮ</p></div>

ಬಾಂಗ್ಲಾದೇಶ ತಂಡದ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X/@ICC)

ದುಬೈ: ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲಿನ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನ, ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ADVERTISEMENT

ಪಾಕಿಸ್ತಾನ ವಿರುದ್ಧ ಕ್ಲೀನ್‌ಸ್ವೀಪ್ ಜಯದ ಸಾಧನೆ ಮಾಡಿದ ಬಾಂಗ್ಲಾದೇಶ ಐತಿಹಾಸಿಕ ಸರಣಿ ಜಯ ಗಳಿಸಿತು. ಮೊದಲ ಪಂದ್ಯದಲ್ಲಿ 10 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಜಯ ಗಳಿಸಿತು. ಆ ಮೂಲಕ ಪಾಕಿಸ್ತಾನ ನೆಲದಲ್ಲಿ ಚಾರಿತ್ರಿಕ ಗೆಲುವಿನ ಸಾಧನೆ ಮಾಡಿತು.

ಎರಡು ಸ್ಥಾನಗಳ ಹಿಂಬಡ್ತಿ ಪಡೆದಿರುವ ಪಾಕಿಸ್ತಾನ, 8ನೇ ಸ್ಥಾನಕ್ಕೆ ಕುಸಿದಿದೆ. 1965ರ ಬಳಿಕ ಪಾಕಿಸ್ತಾನದ ಅತ್ಯಂತ ಕೆಟ್ಟ ರೇಟಿಂಗ್ ಪಾಯಿಂಟ್ (76) ಇದಾಗಿದೆ. ಮತ್ತೊಂದೆಡೆ ಬಾಂಗ್ಲಾದೇಶ 9ನೇ (66) ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ನಂ.1, ಭಾರತ ನಂ.2

ಐಸಿಸಿ ಟೆಸ್ಟ್ ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 124 ಹಾಗೂ ಭಾರತ 120 ರೇಟಿಂಗ್ ಅಂಕಗಳನ್ನು ಪಡೆದುಕೊಂಡಿದೆ.

ಜೋ ರೂಟ್ ನಂ.1

ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ರೂಟ್ ಒಟ್ಟು 922 ರೇಟಿಂಗ್ ಅಂಕಗಳನ್ನು ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ರೂಟ್, 34ನೇ ಟೆಸ್ಟ್ ಶತಕದ ಸಾಧನೆ ಮಾಡಿದ್ದರು.

ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ ಎನಿಸಿದರು. ಅಲ್ಲದೆ ದಿಗ್ಗಜರಾದ ಭಾರತದ ಸುನಿಲ್ ಗವಾಸ್ಕರ್ ಹಾಗೂ ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ದಾಖಲೆಯನ್ನು ಸರಿಗಟ್ಟಿದ್ದರು.

ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಎರಡು (859), ಡೆರಿಲ್ ಮಿಚೆಲ್ ಮೂರು (768) ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ನಾಲ್ಕು (757) ಹಾಗೂ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಐದನೇ (753) ಸ್ಥಾನದಲ್ಲಿದ್ದಾರೆ.

ಅಗ್ರ 10ರ ಪೈಕಿ ಭಾರತದ ರೋಹಿತ್ ಶರ್ಮಾ (751), ಯಶಸ್ವಿ ಜೈಸ್ವಾಲ್ (740) ಹಾಗೂ ವಿರಾಟ್ ಕೊಹ್ಲಿ (737) ಅನುಕ್ರಮವಾಗಿ ಆರು, ಏಳು ಹಾಗೂ ಎಂಟನೇ ಸ್ಥಾನಗಳಲ್ಲಿ ಇದ್ದಾರೆ.

ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ ನಂ.1

ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ (847) ಮತ್ತು ಭಾರತದವರೇ ಆದ ಜಸ್‌ಪ್ರೀತ್ ಬೂಮ್ರಾ ಜಂಟಿ ಎರಡನೇ (847) ಸ್ಥಾನದಲ್ಲಿದ್ದಾರೆ.

ಅಗ್ರ 10ರ ಪೈಕಿ ಭಾರತದ ರವೀಂದ್ರ ಜಡೇಜ ಏಳನೇ (788) ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.