ADVERTISEMENT

Fitness | 2 ಕಿ.ಮೀ ಓಡಲಾಗದವರೂ ಬಾಬರ್ ನಾಯಕತ್ವದ ಪಾಕ್ ತಂಡದಲ್ಲಿದ್ದರು: ಹಫೀಜ್

ಪಿಟಿಐ
Published 21 ಫೆಬ್ರುವರಿ 2024, 10:28 IST
Last Updated 21 ಫೆಬ್ರುವರಿ 2024, 10:28 IST
<div class="paragraphs"><p>2023ರಲ್ಲಿ&nbsp;ಭಾರತದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ವೇಳೆ ಅಭ್ಯಾಸ ನಿರತ ಪಾಕಿಸ್ತಾನ ತಂಡ</p></div>

2023ರಲ್ಲಿ ಭಾರತದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ವೇಳೆ ಅಭ್ಯಾಸ ನಿರತ ಪಾಕಿಸ್ತಾನ ತಂಡ

   

ರಾಯಿಟರ್ಸ್ ಚಿತ್ರ

ಕರಾಚಿ: ಮಾಜಿ ನಾಯಕ ಬಾಬರ್‌ ಅಜಂ ಅವರು ಭಾರತದಲ್ಲಿ ನಡೆದ ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೂ ಮುನ್ನ ತಂಡದ 'ಫಿಟ್‌ನೆಸ್‌'ಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಿರ್ದೇಶಕ ಮೊಹಮ್ಮದ್‌ ಹಫೀಜ್ ಹೇಳಿದ್ದಾರೆ.

ADVERTISEMENT

ಹಫೀಜ್‌ ಅವರೊಂದಿಗಿನ ಒಪ್ಪಂದವನ್ನು ನವೀಕರಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಇತ್ತೀಚೆಗೆ ನಿರಾಕರಿಸಿದೆ. ಇದರ ಬೆನ್ನಲ್ಲೇ ಹಫೀಜ್‌ ಈ ರೀತಿಯ ಹೇಳಿಕೆ ನೀಡಿದ್ದಾರೆ.

ARY sports ಚಾನೆಲ್‌ನಲ್ಲಿ ಇತ್ತೀಚೆಗೆ ಮಾತನಾಡಿರುವ ಹಫೀಜ್‌, 'ನಾನು ನಿರ್ದೇಶಕನಾಗಿ (2023ರಲ್ಲಿ) ಅಧಿಕಾರ ವಹಿಸಿಕೊಂಡ ಬಳಿಕ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡೆವು. ಆ ವೇಳೆ ಪ್ರತಿ ಆಟಗಾರನ ಫಿಟ್‌ನೆಸ್‌ ಮಟ್ಟದ ವರದಿ ನೀಡುವಂತೆ ಹಾಗೂ ಹೊಸ ಫಿಟ್‌ನೆಸ್‌ ಸೂತ್ರ ಸಿದ್ಧಪಡಿಸುವಂತೆ ತಂಡದ ತರಬೇತುದಾರರಿಗೆ ತಿಳಿಸಿದ್ದೆ. ಆಗ ಅವರು, ಮಾಜಿ ನಾಯಕ (ಬಾಬರ್ ಅಜಂ) ಮತ್ತು ಮುಖ್ಯ ಕೋಚ್‌ (ಮಿಕ್ಕಿ ಅರ್ಥರ್‌) ಈ ಹಂತದಲ್ಲಿ ಫಿಟ್‌ನೆಸ್‌ಗೆ ಆದ್ಯತೆ ನೀಡಬೇಕಾಗಿಲ್ಲ. ಆಟಗಾರರನ್ನು ಅವರು ಬಯಸಿದಂತೆ ಆಡಲು ಬಿಡಿ ಎಂದು 6 ತಿಂಗಳ ಹಿಂದೆಯೇ ಸೂಚಿಸಿದ್ದರು ಎಂಬುದಾಗಿ ತಿಳಿಸಿದ್ದರು' ಎಂದು ಬಹಿರಂಗಪಡಿಸಿದ್ದಾರೆ.

'ಆಟಗಾರರ ಫಿಟ್‌ನೆಸ್‌ ಪರಿಶೀಲಿಸದಂತೆ ತಮಗೆ ತಿಳಿಸಿರುವುದಾಗಿ ಆತ (ಫಿಟ್‌ನೆಸ್‌ ತರಬೇತುದಾರ) ಹೇಳಿದ್ದನ್ನು ಕೇಳಿ ದಿಗಿಲುಗೊಂಡಿದ್ದೆ. ಆಧುನಿಕ ಕ್ರಿಕೆಟ್‌ನಲ್ಲಿ ಫಿಟ್‌ನೆಸ್‌ಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ' ಎಂದು ಹಫೀಜ್ ಹೇಳಿದ್ದಾರೆ.

ಪಾಕ್‌ ಆಟಗಾರರ ದೇಹದ ಬೊಜ್ಜು, ಸಹಿಷ್ಣುತೆ ಮಟ್ಟ ಅಂತರರಾಷ್ಟ್ರೀಯ ಮಾನದಂಡಕ್ಕಿಂತ ತೀರಾ ಕಳಪೆಯಾಗಿತ್ತು ಎಂದಿರುವ ಅವರು, ಆಸ್ಟ್ರೇಲಿಯಾದಲ್ಲಿ ಫಿಟ್‌ನೆಸ್‌ ಟೆಸ್ಟ್‌ ನಡೆಸಿದ್ದಾಗ ಕೆಲವು ಆಟಗಾರರು 2 ಕಿ.ಮೀ ಓಟವನ್ನೂ ಪೂರ್ಣಗೊಳಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಆಡುತ್ತಿದ್ದ ಬಾಬರ್ ಅಜಂ ಅವರನ್ನು 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುವಂತೆ ಒಪ್ಪಿಸಲು ತಮಗೆ ಮೂರು ತಿಂಗಳು ಬೇಕಾಯಿತು ಎಂಬುದನ್ನೂ ಹಫೀಜ್ ಇದೇ ವೇಳೆ ಹೇಳಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಬಾಬರ್‌ ನೇತೃತ್ವದಲ್ಲಿ ಆಡಿದ್ದ ಪಾಕ್‌ ಪಡೆ, ಗುಂಪು ಹಂತದಲ್ಲಿ ಆಡಿದ 9 ಪಂದ್ಯಗಳ ಪೈಕಿ ಐದರಲ್ಲಿ ಸೋಲು ಕಂಡಿತ್ತು. ಹೀಗಾಗಿ, ಸೆಮಿಫೈನಲ್‌ ತಲುಪುವುದಕ್ಕೂ ಆ ತಂಡಕ್ಕೆ ಸಾಧ್ಯವಾಗಿರಲಿಲ್ಲ.

ಹಫೀಜ್‌ ಅಧಿಕಾರ ವಹಿಸಿಕೊಂಡ ನಂತರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆದ ಟೂರ್ನಿಗಳಲ್ಲಿ ಪಾಕಿಸ್ತಾನ ಹೀನಾಯ ಪ್ರದರ್ಶನ ತೋರಿತ್ತು. ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ 4–1 ಅಂತರದ ಸೋಲು ಮತ್ತು ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 'ವೈಟ್‌ವಾಶ್‌' ಮುಖಭಂಗ ಅನುಭವಿಸಿತ್ತು.

'2017ರಲ್ಲಿ ಫಿಟ್‌ನೆಸ್‌ಗೆ ಆದ್ಯತೆ'
ಮಾಜಿ ನಾಯಕ ಅಜರ್‌ ಅಲಿ ಅವರೂ ಟಿವಿ ಕಾರ್ಯಕ್ರಮದಲ್ಲಿ ಹಫೀಜ್‌ ಅವರೊಂದಿಗೆ ಭಾಗವಹಿಸಿದ್ದರು. ಅವರು, 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ತೆರಳಿದ್ದ ಪಾಕ್‌ ತಂಡದಲ್ಲಿ ಫಿಟ್‌ನೆಸ್‌ಗೆ ಮೊದಲ ಆದ್ಯತೆ ನೀಡಲಾಗಿತ್ತು. ತರಬೇತಿ ಸಿಬ್ಬಂದಿ ಕಳುಹಿಸಿದ್ದ ಆಟಗಾರ (ಉಮರ್‌ ಅಕ್ಮಲ್‌) ಫಿಟ್‌ನೆಸ್‌ ಟೆಸ್ಟ್‌ ಪಾಸಾಗದ ಕಾರಣ ವಾಪಸ್‌ ಆಗಿದ್ದರು ಎಂದು ತಿಳಿಸಿದ್ದಾರೆ.

ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಮಣಿಸಿ ಚಾಂಪಿಯನ್‌ ಆಗಿದ್ದ ಪಾಕಿಸ್ತಾನ ತಂಡಕ್ಕೆ ಆಗ ಮಿಕ್ಕಿ ಅರ್ಥರ್‌ ಕೋಚ್‌ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.