ಅಮೃತಸರ್: ಪಾಕಿಸ್ತಾನಕ್ಕೆ ಭೇಟಿ ನೀಡಿದ ತಮ್ಮ ನಿಯೋಗಕ್ಕೆ ಉತ್ತಮವಾದ ಆತಿಥ್ಯ ಲಭಿಸಿತು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ರೋಜರ್ ಬಿನ್ನಿ ಸಂತಸ ವ್ಯಕ್ತಪಡಿಸಿದ್ದಾರೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಬಿಸಿಸಿಐ ಪದಾಧಿಕಾರಿಗಳಿಗೆ ತಮ್ಮ ದೇಶಕ್ಕೆ ಆಹ್ವಾನ ಕೋರಿತ್ತು.
ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಭೇಟಿ ನೀಡಿದ್ದರು. ಬುಧವಾರ ಅವರಿಬ್ಬರೂ ಅಠಾರಿ–ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದರು.
ಕಳೆದ 17 ವರ್ಷಗಳಲ್ಲಿ ಬಿಸಿಸಿಐ ಪದಾಧಿಕಾರಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ. ಉಭಯ ದೇಶಗಳ ನಡುವಣ ಇರುವ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ದ್ವಿಪಕ್ಷೀಯ ಸರಣಿಗಳೂ ನಡೆಯುತ್ತಿಲ್ಲ. ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು. ಆದ್ದರಿಂದಾಗಿ ಭಾರತದ ಪಂದ್ಯಗಳನ್ನು ತಟಸ್ಥ ತಾಣವಾದ ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ.
‘ಪಾಕಿಸ್ತಾನವು ನಮಗೆ ಉತ್ತಮ ಆತಿಥ್ಯ ನೀಡಿತು. ನಮ್ಮ ಸುಗಮ ಪ್ರಯಾಣ ಮತ್ತು ಭೇಟಿಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಿತ್ತು‘ ಎಂದು ಬಿನ್ನಿ ಸುದ್ದಿಗಾರರ ಮುಂದೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಭಯ ದೇಶಗಳ ನಡುವೆ ಕ್ರಿಕೆಟ್ ಸಂಬಂಧಗಳ ಮರುಸ್ಥಾಪನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಕುರಿತು ಬಿಸಿಸಿಐ ಏನೂ ಹೇಳಲಾಗದು. ಇದು ಸರ್ಕಾರದ ವಿಷಯ. ಕಾದು ನೋಡುತ್ತೇವೆ. ಮುಂಬರುವ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿದ್ದು, ಪಂದ್ಯ ಆಡಲು ಪಾಕಿಸ್ತಾನ ಬರುತ್ತಿದೆ‘ ಎಂದರು.
ಅಕ್ಟೋಬರ್ 14ರಂದು ಭಾರತ ಮತ್ತು ಪಾಕ್ ತಂಡಗಳು ಅಹಮದಾಬಾದಿನಲ್ಲಿ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಆಡಲಿವೆ.
‘ಪಾಕ್ ಭೇಟಿಯು ಸಂತಸ ನೀಡಿತು. ಭದ್ರತೆ ಹಾಗೂ ಇನ್ನಿತರ ವ್ಯವಸ್ಥೆಗಳು ಉತ್ತಮವಾಗಿದ್ದವು. ಕ್ರಿಕೆಟ್ ವರ್ಚಸ್ಸು ವೃದ್ಧಿಯ ದೃಷ್ಟಿಕೋನದಿಂದ ಇದು ಮಹತ್ವದ ಭೇಟಿಯಾಗಿದೆ. ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳೊಂದಿಗೆ ಬಾಂಧವ್ಯ ಹೊಂದುವ ಗುರಿ ಬಿಸಿಸಿಐನದ್ದು. ಆದ್ದರಿಂದ ಶ್ರೀಲಂಕಾಗೂ ಭೇಟಿ ನೀಡಿದ್ದೆವು. ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸದಸ್ಯರೊಂದಿಗೂ ಉತ್ತಮ ಸಂಬಂಧ ಹೊಂದಿದ್ದೇವೆ‘ ಎಂದು ಉಪಾಧ್ಯಕ್ಷ ಶುಕ್ಲಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.