ಲಾಹೋರ್:ಜನವರಿ 17 ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ಗೆ ಆಯ್ಕೆ ಮಾಡಲಾಗಿರುವ ತಂಡದಿಂದ, ಹದಿನಾರು ವರ್ಷದ ವೇಗದ ಬೌಲರ್ ನಸೀಂ ಶಾ ಅವರನ್ನು ಕೈ ಬಿಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.
ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಮೂರು ಟೆಸ್ಟ್) ಆಡಿದ ಅನುಭವ ಇರುವ ಶಾ ಅವರನ್ನು ಕೈ ಬಿಡಲು ಮಂಡಳಿಯು ನಿರ್ಧರಿಸಿದೆ. ಶಾ ಬದಲು ಮೊಹಮದ್ ವಾಸೀಂ ಜೂನಿಯರ್ ತಂಡ ಸೇರಿಕೊಂಡಿದ್ದಾರೆಎಂದು ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.
‘ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಭವಿಷ್ಯದ ತಾರೆಗಳಿಗೆ ಅಡಿಗಲ್ಲು ಇದ್ದಂತೆ. ಯುವ ಪ್ರತಿಭೆಗಳು ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಸಾಗಲುಈ ವೇದಿಕೆ ಇದೆ. ಶಾ ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದಾರೆ’ ಎಂದು ಪಿಸಿಬಿ ಮುಖ್ಯಸ್ಥ ವಾಸೀಂ ಖಾನ್ ಹೇಳಿದ್ದಾರೆ.
‘ಈ ನಿರ್ಧಾರವು (ಶಾ ಕೈಬಿಟ್ಟದ್ದು) ನಮ್ಮ ತಂಡದ ವಿಶ್ವಕಪ್ ಗೆಲುವಿನ ಅವಕಾಶಕ್ಕೆ ತಡೆಯಾಗುವುದಿಲ್ಲ. ನಮ್ಮ ಆಯ್ಕೆ ಸಮಿತಿಯು ಅನುಭವ ಇರುವ ಮತ್ತು ಆತ್ಮ ವಿಶ್ವಾಸದಿಂದ ಆಡಬಲ್ಲ ತಂಡವನ್ನು ಆಯ್ಕೆ ಮಾಡಿದೆ’ ಎಂದೂ ತಿಳಿಸಿದ್ದಾರೆ.
ಮುಂದುವರಿದು, ಶಾ ಪಾಕಿಸ್ತಾನದಲ್ಲಿಯೇ ಉಳಿಯಲಿದ್ದಾರೆ. ಬೌಲಿಂಗ್ ಕೋಚ್ ವಕಾರ್ ಯೂನಿಸ್ ಮಾರ್ಗದರ್ಶನದಲ್ಲಿ ತಮ್ಮ ಕೌಶಲ್ಯ ಉತ್ತಮ ಪಡಿಸಿಕೊಳ್ಳಲು ಅಭ್ಯಾಸ ನಡೆಸಲಿದ್ದಾರೆ. ಅಷ್ಟೇ ಅಲ್ಲದೆ, ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಸರಣಿಗೆ ಲಭ್ಯವಿರಲಿದ್ದಾರೆ ಎಂದೂ ಹೇಳಿದ್ದಾರೆ.
ಶಾ ಕಳೆದ ವರ್ಷ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಪಂದ್ಯ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
19 ವರ್ಷದೊಳಗಿನವರ ತಂಡದ ಪರ ಇದುವರೆಗೆ ಕೇವಲ ಒಂದು ಪಂದ್ಯವನ್ನಷ್ಟೇ ಆಡಿರುವ ವಾಸೀಂ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ. ಮಾತ್ರವಲ್ಲದೆ, ಮೂರು ದಿನಗಳ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು 7 ವಿಕೆಟ್ ಉರುಳಿಸಿದ್ದಾರೆ.
ಮೂರು ಸಲ ರನ್ನರ್ಸ್ ಅಪ್ ಆಗಿರುವ ಪಾಕಿಸ್ತಾನ, 2004, 2006ರಲ್ಲಿ19 ವರ್ಷದೊಳಗಿನವರ ವಿಶ್ವಕಪ್ ಚಾಂಪಿಯನ್ ಆಗಿತ್ತು. ಈ ಬಾರಿ ಹದಿನಾರು ತಂಡಗಳು ಪಾಲ್ಗೊಳ್ಳಲಿರುವ ಟೂರ್ನಿಯಲ್ಲಿ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜನವರಿ 19ರಂದು ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು ಆಡಲಿದೆ.
‘ನಸೀಂ ಶಾರನ್ನು ವಿಶ್ವಕಪ್‌ಗೆ ಕಳುಹಿಸಬೇಡಿ’ ಎಂದು ಮಾಜಿ ಆಲ್ರೌಂಡರ್ ಮೊಹಮದ್ ಹಫೀಜ್, ಪಿಸಿಬಿಗೆ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.