ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯ ಆಡಲು ಬೆಂಗಳೂರಿಗೆ ಬಂದಿಳಿದಿರುವ ಪಾಕಿಸ್ತಾನ ತಂಡದ ಬಾಬರ್ ಆಜಂ ಮತ್ತು ವೇಗಿ ಶಾಹೀನ್ ಶಾ ಅಫ್ರಿದಿ ಸೇರಿದಂತೆ ಕೆಲವು ಆಟಗಾರರು ವಿಷಮಶೀತ ಜ್ವರದಿಂದ ಬಳಲಿದ್ದಾರೆ.
ಕಳೆದ ಶನಿವಾರ ಅಹಮದಾಬಾದಿನಲ್ಲಿ ಭಾರತ ತಂಡದ ಎದುರಿನ ಪಂದ್ಯದಲ್ಲಿ ಸೋತಿದ್ದ ಪಾಕ್ ತಂಡವು ಭಾನುವಾರ ಇಲ್ಲಿಗೆ ಬಂದಿಳಿದಿತ್ತು. ಇದೇ 20ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎದುರು ನಡೆಯುವ ಪಂದ್ಯದಲ್ಲಿ ಆಡಲಿದೆ. ಆದರೆ ಭಾನುವಾರ ಕೆಲವು ಆಟಗಾರರಿಗೆ ಜ್ವರ ಇರುವುದು ಪತ್ತೆಯಾಗಿತ್ತು. ತಂಡದ ವೈದ್ಯಕೀಯ ಸಿಬ್ಬಂದಿಯು ಚಿಕಿತ್ಸೆ ನೀಡಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬಹುತೇಕರು ಚೇತರಿಸಿಕೊಂಡಿದ್ದು, ಬುಧವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
‘ಕೆಲವು ಆಟಗಾರರು ಜ್ವರದಿಂದ ಬಳಲಿದ್ದರು. ಅದರಲ್ಲಿ ಕೆಲವರು ಸಂಪೂರ್ಣ ಗುಣಮುಖರಾಗಿದ್ದಾರೆ. ಇನ್ನುಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಅವರ ಮೇಲೆ ನಿಗಾ ವಹಿಸಲಾಗಿದ್ದು ಆರೈಕೆ ಮಾಡಲಾಗುತ್ತಿದೆ. ನಮ್ಮ ವೈದ್ಯಕೀಯ ತಂಡವು ಉತ್ತಮವಾದ ಚಿಕಿತ್ಸೆ ನೀಡುತ್ತಿದೆ. ಪ್ರಯಾಣ ಮತ್ತು ಹವಾಗುಣದಲ್ಲಿ ಆದ ಬದಲಾವಣೆಯಿಂದಾಗಿ ಜ್ವರ ಬಂದಿರುವ ಸಾಧ್ಯತೆ ಇದೆ‘ ಎಂದು ತಂಡದ ಮಾಧ್ಯಮ ವ್ಯವಸ್ಥಾಪಕ ಎಹಸಾನ್ ಇಫ್ತಿಕಾರ್ ನೇಗಿ ತಿಳಿಸಿದ್ದಾರೆ.
ನಾಯಕ ಬಾಬರ್ ಮತ್ತು ಬೌಲರ್ ಆಫ್ರಿದಿಯವರು ಚೇತರಿಸಿಕೊಂಡಿದ್ದಾರೆಂದೂ ಅವರು ಹೇಳಿದರು.
ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ವೈರಲ್ ಜ್ವರ ಮತ್ತು ಡೆಂಗಿ ಜ್ವರದ ಪ್ರಕರಣಗಳೂ ಹೆಚ್ಚಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.