ದುಬೈ (ಪಿಟಿಐ): ಟೆಸ್ಟ್‌ಗೆ ಪುನರಾಗಮನದ ಆರಂಭದಲ್ಲೇ ಸೊಗಸಾದ ಶತಕ ಬಾರಿಸಿದ ವಿಕೆಟ್ ಕೀಪರ್–ಬ್ಯಾಟರ್ ರಿಷಭ್ ಪಂತ್ ಮತ್ತೆ ಐಸಿಸಿ ಕ್ರಮಾಂಕಪಟ್ಟಿಗೆ ಪ್ರವೇಶಪಡೆದಿದ್ದು ಆರನೇ ಸ್ಥಾನಕ್ಕೇರಿ ಗಮನ ಸೆಳೆದಿದ್ದಾರೆ. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಹಿಂಬಡ್ತಿ ಪಡೆದಿದ್ದಾರೆ.
ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಪಂತ್ ಶತಕ ಬಾರಿಸಿದ್ದರು. ಅವರು 731 ಪಾಯಿಂಟ್ಸ್ ಪಡೆದಿದ್ದಾರೆ. ಆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅರ್ಧ ಸತಕ ಬಾರಿಸಿದ್ದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ (751) ಐದನೇ ಸ್ಥಾನಕ್ಕೇರಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ ಐದು ಸ್ಥಾನ ಕೆಳಗಿಳಿದಿದ್ದು ಹತ್ತನೇ ಸ್ಥಾನದಲ್ಲಿ ನೆಲಸಿದ್ದಾರೆ. ಅವರ ಬಳಿ 716 ರೇಟಿಂಗ್ ಪಾಯಿಂಟ್‌ಗಳಿವೆ. ಕೊಹ್ಲಿ ಕೂಡ ಐದು ಸ್ಥಾನ ಹಿಂಬಡ್ತಿ ಪಡೆದಿದ್ದು 12ನೇ ಸ್ಥಾನಕ್ಕಿಳಿದಿದ್ದಾರೆ.
ಗಾಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಟೆಸ್ಟ್ ಬೌಲರ್‌ಗಳ ಪಟ್ಟಿಲ್ಲಿ ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿದ್ದು, 13ರಿಂದ ಎಂಟನೇ ಸ್ಥಾನಕ್ಕೇರಿದ್ದಾರೆ. ಆ ಟೆಸ್ಟ್‌ನಲ್ಲಿ 9 ವಿಕೆಟ್ ಪಡೆದಿದ್ದ ಅವರು 743 ಪಾಯಿಂಟ್ಸ್ ಹೊಂದಿದ್ದಾರೆ. ಶ್ರೀಲಂಕಾ ಬೌಲರ್‌ಗಳ ಪೈಕಿ ಮೂರೂ ಮಾದರಿಗಳಲ್ಲಿ ಅವರ ಸ್ಥಾನವೇ ಉತ್ತಮ ಎನಿಸಿದೆ.
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (854) ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ (847) ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜ ಆರನೇ ಸ್ಥಾನಕ್ಕೇರುವ ಹಾದಿಯಲ್ಲಿ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ.
ಅಫ್ಗಾನಿಸ್ತಾನದ ಯುವ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಮತ್ತು ಆಸ್ಟ್ರೇಲಿಯಾದ ಬಿರುಸಿನ ಬ್ಯಾಟರ್ ಟ್ರಾವಿಸ್ ಹೆಡ್ ಅವರು ಏಕದಿನ ಬ್ಯಾಟರ್‌ಗಳ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಿಬ್ಬರು ಕ್ರಮವಾಗಿ ಯುಎಇ ಮತ್ತು ಇಂಗ್ಲೆಂಡ್‌ನಲ್ಲಿ ಶತಕಗಳನ್ನು ಬಾರಿಸಿದ್ದರು.
ಈಚೆಗಷ್ಟೇ 23ಕ್ಕೆ ಕಾಲಿಟ್ಟಿರುವ ಗುರ್ಬಾಝ್ (692) ಎಂಟನೇ ಸ್ಥಾನ ಪಡೆದಿದ್ದಾರೆ. ಆ ಹಾದಿಯಲ್ಲಿ ಏಕದಿನ ಬ್ಯಾಟರ್‌ಗಳ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಅಫ್ಗನ್ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಇಬ್ರಾಹಿಂ ಜದ್ರಾನ್ 12ನೇ ಸ್ಥಾನ ಪಡೆದಿದ್ದೇ ಅಫ್ಗನ್ ಆಟಗಾರನೊಬ್ಬನ ಇದುವರೆಗಿನ ಉತ್ತಮ ಸಾಧನೆಯಾಗಿತ್ತು.
ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 154 ರನ್ ಸಿಡಿಸಿದ ಹೆಡ್ (684) ಒಂಬತ್ತನೇ ಸ್ಥಾನಕ್ಕೇರಿದ್ದಾರೆ.
ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಲೆಗ್ ಸ್ಪಿನ್ನರ್ ರಶೀದ್ ಖಾನ್ (668) ಮೂರನೇ ಸ್ಥಾನಕ್ಕೇರಿದ್ದಾರೆ. ದುಬೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡು ಏಕದಿನ ಪಂದ್ಯಗಲ್ಲಿ ಅವರು ಏಳು ವಿಕೆಟ್ ಕಬಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.