ADVERTISEMENT

ಹಣದ ವಿಷಯ ತಂಡ ತೊರೆಯಲು ಕಾರಣ: ಗಾವಸ್ಕರ್‌ ತಳ್ಳಿಹಾಕಿದ ರಿಷಭ್ ಪಂತ್

ಪಿಟಿಐ
Published 19 ನವೆಂಬರ್ 2024, 13:30 IST
Last Updated 19 ನವೆಂಬರ್ 2024, 13:30 IST
ರಿಷಭ್ ಪಂತ್
ರಿಷಭ್ ಪಂತ್   

ನವದೆಹಲಿ: ತಂಡದಲ್ಲಿ ಉಳಿಸಿಕೊಳ್ಳುವ ಶುಲ್ಕಕ್ಕೆ (ರಿಟೆನ್ಶನ್‌ ಫೀ) ಸಂಬಂಧಿಸಿದ ಭಿನ್ನಾಭಿಪ್ರಾಯವು ತಾವು ಡೆಲ್ಲಿ ಕ್ಯಾಪಿಟಲ್ಸ್‌ ತೊರೆಯಲು ಕಾರಣ ಎಂದು ತಮ್ಮ ವಿರುದ್ಧ ಸುನಿಲ್ ಗಾವಸ್ಕರ್‌ ವ್ಯಕ್ತಪಡಿಸಿರುವ ಅನಿಸಿಕೆಯನ್ನು ಭಾರತ ತಂಡದ ಆಟಗಾರ ರಿಷಭ್ ಪಂತ್ ತಳ್ಳಿಹಾಕಿದ್ದಾರೆ.

ಭೀಕರ ಕಾರು ಅಪಘಾತದ ನಂತರ ಚೇತರಿಸಿಕೊಂಡ ನಂತರ ಪಂತ್‌ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದು ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಮೂಲಕ.  ಆದರೆ ಈ ಬಾರಿ ಫ್ರಾಂಚೈಸಿಗಳು  ಉಳಿಸಿಕೊಳ್ಳದ ಅತಿ ಪ್ರಮುಖ ಆಟಗಾರರಲ್ಲಿ ಅವರೂ ಒಳಗೊಂಡಿದ್ದಾರೆ. ನವೆಂಬರ್ 24 ಮತ್ತು 25ರಂದು ಜೆದ್ದಾದಲ್ಲಿ ನಡೆಯಲಿರುವ ಹರಾಜಿನಲ್ಲಿ ಪಂತ್‌ ಅವರಿಗೆ ಅತಿ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆಯಿದೆ.

‘ನಾನು ತಂಡದಿಂದ ಹೊರಬಿದ್ದಿದ್ದು ಹಣದ ವಿಷಯಕ್ಕೆ ಅಲ್ಲ ಎನ್ನುವುದನ್ನು ಖಚಿತವಾಗಿ ಹೇಳಬಲ್ಲೆ’ ಎಂದು ಪಂತ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಹರಾಜಿಗೆ ಸಂಬಂಧಿಸಿ ಗಾವಸ್ಕರ್‌ ಮಾತನಾಡಿದ ವಿಡಿಯೊಕ್ಕೆ ಸಂಬಂಧಿಸಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಪಂತ್ ಅವರನ್ನು ತಂಡಕ್ಕೆ ಪಡೆಯಲು ಮುಂದಾಗಲಿದೆ ಎಂದು ನಿರೀಕ್ಷಿಸುವುದಾಗಿ ಗಾವಸ್ಕರ್ ಹೇಳಿದ್ದರು. ರಿಟೆನ್ಶನ್ ಫೀಗೆ ಸಂಬಂಧಿಸಿ ಫ್ರಾಂಚೈಸಿ ಮತ್ತು ಆಟಗಾರನ ನಡುವೆ ಭಿನ್ನಾಭಿಪ್ರಾಯ ಇರುವುದು ಅಚ್ಚರಿ ಮೂಡಿಸಿದೆ ಎಂದೂ ಹೇಳಿದ್ದರು.‌

‘ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಅವರನ್ನು ತಂಡಕ್ಕೆ ಮರಳಿ ಕರೆಸಲು ಪ್ರಯತ್ನಿಸುವುದು ಖಚಿತ ಎಂಬುದು ತಮ್ಮ ಭಾವನೆ. ಅವರಿಗೆ ನಾಯಕನ ಅಗತ್ಯವೂ ಇದೆ. ಪಂತ್‌ ತಂಡದಲ್ಲಿರದೇ ಹೋದರೆ, ಅವರು ಹೊಸ ನಾಯಕನನ್ನು ಕಂಡುಕೊಳ್ಳಬೇಕಾಗುತ್ತದೆ. ಡೆಲ್ಲಿ ಖಂಡಿತವಾಗಿ ಪಂತ್ ಅವರನ್ನು ಸೆಳೆಯಲು ಪ್ರಯತ್ನಿಸಲಿದೆ’ ಎಂದು ಗಾವಸ್ಕರ್ ಸ್ಟಾರ್‌ ಸ್ಪೋರ್ಟ್ಸ್‌ಗೆ ತಿಳಿಸಿದ್ದರು.

ಪಂತ್ ಜೊತೆ ಇನ್ನಿಬ್ಬರು ಮಾಜಿ ನಾಯಕರಾದ ಶ್ರೇಯಸ್ ಅಯ್ಯರ್ (ಕೋಲ್ಕತ್ತ ನೈಟ್‌ ರೈಡರ್ಸ್‌) ಮತ್ತು ಕೆ.ಎಲ್‌.ರಾಹುಲ್ (ಲಖನೌ ಸೂಪರ್‌ ಜೈಂಟ್ಸ್‌) ಅವರು ₹2ಕೋಟಿ ಮೂಲ ಬೆಲೆ ಹೊಂದಿದ ಭಾರತದ ಪ್ರಮುಖ ಆಟಗಾರರಲ್ಲಿ ಒಳಗೊಂಡಿದ್ದಾರೆ.

2016ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಂದಿನಿಂದ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್ ಭಾಗವಾಗಿದ್ದಾರೆ. ಅವರು ಐಪಿಎಲ್‌ನಲ್ಲಿ 35.31ರ ಸರಾಸರಿಯಲ್ಲಿ 3,284 ರನ್ ಗಳಿಸಿದ್ದಾರೆ. 111 ಪಂದ್ಯಗಳನ್ನು ಆಡಿರುವ ಅವರು ಒಂದು ಶತಕ, 18 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.