ADVERTISEMENT

ಜಿಂಬಾಬ್ವೆ ಪ್ರವಾಸ | ಭಾರತ ತಂಡಕ್ಕೆ ಗಿಲ್ ನಾಯಕ: ಪರಾಗ್‌, ಅಭಿಷೇಕ್‌ಗೆ ಅವಕಾಶ

ಪರಾಗ್‌, ಅಭಿಷೇಕ್‌, ನಿತೀಶ್‌ಗೆ ಅವಕಾಶ

ಪಿಟಿಐ
Published 24 ಜೂನ್ 2024, 14:19 IST
Last Updated 24 ಜೂನ್ 2024, 14:19 IST
ಶುಭಮನ್ ಗಿಲ್
ಪಿಟಿಐ ಚಿತ್ರ
ಶುಭಮನ್ ಗಿಲ್ ಪಿಟಿಐ ಚಿತ್ರ   

ನವದೆಹಲಿ: ಯುವ ಆಟಗಾರರಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಅವರು ಐಪಿಎಲ್‌ನಲ್ಲಿ ತೋರಿದ ಆಟಕ್ಕೆ ‘ಪುರಸ್ಕಾರ’ ಪಡೆದಿದ್ದಾರೆ. ಮುಂಬರುವ ಜಿಂಬಾಬ್ವೆ ಕಿರು ಪ್ರವಾಸಕ್ಕೆ ಅವರು ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶುಭಮನ್ ಗಿಲ್‌ಗೆ ನಾಯಕತ್ವ ವಹಿಸಲಾಗಿದೆ.

ಭಾರತ ತಂಡಕ್ಕೆ ಮುಂದೆ ಬಿಡುವಿಲ್ಲದ ವೇಳಾಪಟ್ಟಿಯ ಇರುವ ಕಾರಣ, ಹಾಲಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಜುಲೈ 6ರಂದು ಮೊದಲ ಪಂದ್ಯ ನಡೆಯಲಿದೆ. ಜುಲೈ 7, 10, 13, 14ರಂದು ಉಳಿದ ಪಂದ್ಯಗಳು ನಡೆಯಲಿವೆ.

ADVERTISEMENT

ತುಷಾರ್ ದೇಶಪಾಂಡೆ, ಹರ್ಷಿತ್ ರಾಣಾ, ಆವೇಶ್ ಖಾನ್ ಮತ್ತು ರಿಂಕು ಸಿಂಗ್ ಅವರೂ 15 ಸದಸ್ಯರ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಗಿಲ್ ಮತ್ತು ಆವೇಶ್, ವಿಶ್ವಕಪ್‌ಗೆ ಟ್ರಾವೆಲಿಂಗ್ ರಿಜರ್ವ್ಸ್‌ ಆಗಿದ್ದು, ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ. ಹೀಗಾಗಿ ಗುಂಪು ಪಂದ್ಯಗಳ ನಂತರ ಅವರನ್ನು ತಂಡದಿಂದ ಮುಕ್ತಗೊಳಿಸಲಾಗಿದೆ.

ಪಂಜಾಬ್‌ನ ಅಭಿಷೇಕ್‌ ಸನ್‌ರೈಸರ್ಸ್‌ ಹೈದರಾಬಾದ್ ಪರ ಕಳೆದ ಐಪಿಎಲ್‌ ಋತುವಿನಲ್ಲಿ 484 ರನ್ ಗಳಿಸಿದ್ದರು. ರಾಜಸ್ಥಾನ ರಾಯಲ್ಸ್ ಪರ, ಅಸ್ಸಾಮ್‌ನ ಪರಾಗ್ 573 ರನ್ ಕಲೆಹಾಕಿದ್ದರು.

ತಂಡ ಹೀಗಿದೆ:

ಶುಭಮನ್ ಗಿಲ್‌ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕವಾಡ, ಅಭಿಷೇಕ್ ಶರ್ಮಾ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಧ್ರುವ್ ಜುರೇಲ್ (ವಿಕೆಟ್‌ ಕೀಪರ್‌), ನಿತೀಶ್ ರೆಡ್ಡಿ,ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್‌ ಖಾನ್‌, ಖಲೀಲ್ ಅಹ್ಮದ್, ಮುಕೇಶ್ ಕುಮಾರ್ ಮತ್ತು ತುಷಾರ್ ದೇಶಪಾಂಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.