ADVERTISEMENT

ಎಲ್ಲ ಮಾದರಿಯ ಕ್ರಿಕೆಟ್‌ಗೂ ಗುಡ್ ಬೈ ಹಾಡಿದ ಪಾರ್ಥಿವ್ ಪಟೇಲ್

ಏಜೆನ್ಸೀಸ್
Published 9 ಡಿಸೆಂಬರ್ 2020, 7:04 IST
Last Updated 9 ಡಿಸೆಂಬರ್ 2020, 7:04 IST
ಪಾರ್ಥಿವ್ ಪಟೇಲ್
ಪಾರ್ಥಿವ್ ಪಟೇಲ್   

ನವದೆಹಲಿ: ಭಾರತೀಯ ಕ್ರಿಕಟಿಗ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ 35ರ ಹರೆಯದ ಪಾರ್ಥಿವ್ ಪಟೇಲ್, 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಘೋಷಿಸುವುದಾಗಿ ತಿಳಿಸಿದ್ದಾರೆ.

ಪಾರ್ಥಿವ್ ಪಟೇಲ್ 25 ಟೆಸ್ಟ್, 38 ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಟೆಸ್ಟ್ ಹಾಗೂ ಏಕದಿನದಲ್ಲಿ ಅನುಕ್ರಮವಾಗಿ ಆರು ಹಾಗೂ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೊನೆಯದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.

ADVERTISEMENT

'ಇಂದು ನಾನು ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತೇನೆ. 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ಪರದೆ ಬೀಳುವಾಗ, ಅನೇಕರಿಗೆ ಕೃತಜ್ಞತೆಯಿಂದ ಆಭಾರಿಯಾಗಿದ್ದಾರೆ. ಬಿಸಿಸಿಐ 17 ವರ್ಷದ ಬಾಲಕನ ಮೇಲೆ ಉದಾರವಾದ ವಿಶ್ವಾಸ ಹಾಗೂ ನಂಬಿಕೆಯನ್ನು ತೋರಿದೆ. ತನ್ನ ತವರೂರು ಗುಜರಾತ್ ಕ್ರಿಕೆಟ್ ಸಂಸ್ಥೆಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ' ಎಂದು ಉಲ್ಲೇಖಿಸಿದ್ದಾರೆ.

194 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಾರ್ಥಿವ್ ಪಟೇಲ್ 11,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ 27 ಶತಕ ಹಾಗೂ 67 ಅರ್ಧಶತಕಗಳು ಸೇರಿವೆ. ಹಾಗೆಯೇ 486 ಕ್ಯಾಚ್ ಹಾಗೂ 77 ಸ್ಟಂಪಿಂಗ್ ಸಾಧನೆ ಮಾಡಿದ್ದರು. 2016-17ನೇ ಸಾಲಿನಲ್ಲಿ ಗುಜರಾತ್‌ಗೆ ಚೊಚ್ಚಲ ರಣಜಿ ಕಿರೀಟ ದೊರಕಿಸಿಕೊಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು.

ಧೋನಿಯಿಂದಾಗಿ ಅವಕಾಶ ವಂಚಿತ...
ಮ್ಯಾಚ್ ಫಿಕ್ಸಿಂಗ್ ಕರಾಳ ಅಧ್ಯಾಯದ ಬಳಿಕ 2000ನೇ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ನೂತನ ವಿಕೆಟ್ ಕೀಪರ್ ಹುಡುಕಾಟದಲ್ಲಿತ್ತು. 17ರ ಪೋರ ಪಾರ್ಥಿವ್ ಪಟೇಲ್ ಅಂದಿನ ನಾಯಕ ಸೌರವ್ ಗಂಗೂಲಿ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಸೌರವ್ ಗಂಗೂಲಿ ಗರಡಿಯಲ್ಲಿ ಪಳಗಿದ ಗುಜರಾತ್ ಮೂಲದ ಪಾರ್ಥಿವ್ ಪಟೇಲ್ ಪರಿಪೂರ್ಣ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದರು.

2002ನೇ ಇಸವಿಯ ಆಗಸ್ಟ್ 8ರಂದು ತಮ್ಮ 17ರ ಹರೆಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿದ ಪಾರ್ಥಿವ್ ಪಟೇಲ್ ದಾಖಲೆ ಬರೆದರು. ಅಲ್ಲದೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ವಿಕೆಟ್ ಕೀಪರ್ ಎನಿಸಿದರು. ಬಳಿಕ 2003 ಜೂನ್ 4ರಂದು ಏಕದಿನ ಕ್ರಿಕೆಟ್‌ಗೂ ಕಾಲಿರಿಸಿದರು.

2003ನೇ ಇಸವಿಯಲ್ಲಿ ಹೈ ಸ್ಕೂಲ್ ಬೋರ್ಡ್ ಪರೀಕ್ಷೆಯನ್ನು ಮಿಸ್ ಮಾಡಿದ ಪಾರ್ಥಿವ್ ಪಟೇಲ್ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ವಿಮಾನವೇರಿದರು. ಆಸೀಸ್ ಪ್ರವಾಸದಲ್ಲಂತೂ ಬ್ರೆಟ್ ಲೀ ಅಂಥ ಮಾರಕ ಬೌನ್ಸರ್ ದಾಳಿಯನ್ನು ಎದುರಿಸಿ ಮುದ್ದು ಮುಖದ ಪಾರ್ಥಿವ್ ಪಟೇಲ್ ಎಲ್ಲರ ಪ್ರೀತಿಗೆ ಪಾತ್ರವಾದರು.

ಈ ಮಧ್ಯೆ ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಅವರಂತಹ ಮಹಾನ್ ವಿಕೆಟ್ ಕೀಪರ್‌ಗಳ ಆಗಮನದೊಂದಿಗೆ ಪಾರ್ಥಿವ್ ಪಟೇಲ್ ನಿಧಾನವಾಗಿ ಅವಕಾಶ ವಂಚಿತರಾದರು.

ಪಾರ್ಥಿವ್ ಪಟೇಲ್ ಅಂತಿಮ ಟೆಸ್ಟ್ ಪಂದ್ಯವನ್ನು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಹಾಗೆಯೇ ಎಂಟು ವರ್ಷಗಳ ಹಿಂದೆ 2012ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು.

ಪಾರ್ಥಿವ್ ಪಟೇಲ್ ವೃತ್ತಿ ಜೀವನ:
*ಟೆಸ್ಟ್: ಪಂದ್ಯ: 25, ಇನ್ನಿಂಗ್ಸ್: 38, ಅಜೇಯ 8, ರನ್: 938, ಗರಿಷ್ಠ: 71, ಸರಾಸರಿ: 31.13, ಅರ್ಧಶತಕ: 6, ಕ್ಯಾಚ್: 62, ಸ್ಟಂಪಿಂಗ್: 10
*ಏಕದಿನ: ಪಂದ್ಯ: 38, ಇನ್ನಿಂಗ್ಸ್: 34, ಅಜೇಯ 3, ರನ್: 736, ಗರಿಷ್ಠ: 95, ಸರಾಸರಿ: 23.74, ಅರ್ಧಶತಕ: 4, ಕ್ಯಾಚ್: 30, ಸ್ಟಂಪಿಂಗ್: 9
*ಟಿ20: ಪಂದ್ಯ: 2, ಇನ್ನಿಂಗ್ಸ್: 2, ರನ್: 736, ಗರಿಷ್ಠ: 36, ಸರಾಸರಿ: 18.00, ಕ್ಯಾಚ್: 1
*ಐಪಿಎಲ್: ಪಂದ್ಯ: 139, ಇನ್ನಿಂಗ್ಸ್: 137, ಅಜೇಯ 11, ರನ್: 2848, ಗರಿಷ್ಠ: 81, ಸರಾಸರಿ: 120.78, ಅರ್ಧಶತಕ: 13

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.