ADVERTISEMENT

ಪಾಕ್‌ ವಿರುದ್ಧ ಮೊದಲ ಏಕದಿನ ಪಂದ್ಯ: ಆಸ್ಟ್ರೇಲಿಯಾಗೆ ಗೆಲುವು

ಏಜೆನ್ಸೀಸ್
Published 4 ನವೆಂಬರ್ 2024, 13:55 IST
Last Updated 4 ನವೆಂಬರ್ 2024, 13:55 IST
<div class="paragraphs"><p>ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್</p></div>

ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್

   

– ಕ್ರಿಕೆಟ್ ಆಸ್ಟ್ರೇಲಿಯಾ ಚಿತ್ರ

ಮೆಲ್ಬರ್ನ್: ಒತ್ತಡದ ನಡುವೆಯೂ ನಾಯಕ ಪ್ಯಾಟ್‌ ಕಮಿನ್ಸ್‌ (ಅಜೇಯ 32) ಅವರ ಸಂಯಮದ ಆಟದಿಂದ ಆಸ್ಟ್ರೇಲಿಯಾ ತಂಡ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೇಲೆ ಸೋಮವಾರ ಎರಡು ವಿಕೆಟ್‌ಗಳ ರೋಚಕ ಜಯ ಪಡೆಯಿತು.

ADVERTISEMENT

204 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 99 ಎಸೆತಗಳಿರುವಂತೆ ಗೆಲುವಿನ ಕೇಕೆ ಹಾಕಿತು. ಆದರೆ ಅದಕ್ಕೆ ಸ್ವಲ್ಪ ಮೊದಲು ಐದು ಎಸೆತಗಳ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆತಂಕದ ಕ್ಷಣಗಳನ್ನು ಎದುರಿಸಿತು.

‘ಇದು ಅಮೋಘ ಪಂದ್ಯ. ಆದರೆ ಅಂದುಕೊಂಡದ್ದಕ್ಕಿಂತ ಹೆಚ್ಚು ಬಿಗುವಿನಿಂದ ಕೂಡಿತು’ ಎಂದು ಪಂದ್ಯದ ಬಳಿಕ ಕಮಿನ್ಸ್‌ ಪ್ರತಿಕ್ರಿಯಿಸಿದರು.

ಎರಡನೇ ಪಂದ್ಯ ಆಡಿಲೇಡ್‌ನಲ್ಲಿ ಶುಕ್ರವಾರ ನಡೆಯಲಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ಪರ್ತ್‌ನಲ್ಲಿ ನಿಗದಿಯಾಗಿದೆ.

ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್‌ ಹೆಡ್‌ ಪಿತೃತ್ವ ರಜೆಯ ಮೇಲಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಹೊಸ ಆರಂಭ ಆಟಗಾರರಾಗಿ ಜೇಕ್‌ ಫ್ರೇಸರ್‌–ಮೆಕ್‌ಗುರ್ಕ್ ಮತ್ತು ಮ್ಯಾಥ್ಯೂ ಶಾರ್ಟ್‌ ಕಣಕ್ಕಿಳಿದರು. ಆದರೆ ಶಾರ್ಟ್‌ ನಾಲ್ಕೇ ಎಸೆತಗಳಲ್ಲಿ ಶಾಹೀನ್ ಶಾ ಅಫ್ರೀದಿ ಅವರಿಗೆ ವಿಕೆಟ್‌ ನೀಡಿದರು. ಮೆಕ್‌ಗುರ್ಕ್ 16 ರನ್‌ ಗಳಿಸಿದ್ದಾಗ ನಸೀಮ್ ಶಾ ಬೌಲಿಂಗ್‌ನಲ್ಲಿ ಮಿಡ್‌ಆನ್‌ನಲ್ಲಿ ಕ್ಯಾಚಿತ್ತರು.

ಅನುಭವಿ ಸ್ಟೀವ್‌ ಸ್ಮಿತ್ (44) ಮತ್ತು ಜೋಶ್ ಇಂಗ್ಲಿಷ್ (49) ಮೂರನೇ ವಿಕೆಟ್‌ಗೆ 85 ರನ್ ಸೇರಿಸಿ ತಂಡಕ್ಕೆ ಚೇತರಿಕೆ ಒದಗಿಸಿದರು. ಆದರೆ ಇಬ್ಬರೂ ಅಲ್ಪ ಅಂತರದಲ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಹ್ಯಾರಿಸ್ ರವೂಫ್ ಅವರು ಲಾಬುಶೇನ್ (16) ಮತ್ತು ಮ್ಯಾಕ್ಸ್‌ವೆಲ್‌ (0) ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಪಡೆದರು. ಒಂದು ಹಂತದಲ್ಲಿ ಎಂಟು ವಿಕೆಟ್‌ಗಳು ಬಿದ್ದಾಗ ಆತಿಥೇಯರ ಗೆಲುವಿಗೆ ಇನ್ನೂ 19 ರನ್‌ಗಳು ಬೇಕಿದ್ದವು. ಆದರೆ ಕಮಿನ್ಸ್‌ ಧೃತಿಗೆಡಲಿಲ್ಲ.

ಇದಕ್ಕೆ ಮೊದಲು ಮಿಚೆಲ್ ಸ್ಟಾರ್ಕ್ (33ಕ್ಕೆ3) ದಾಳಿಗೆ ‍ಸಿಲುಕಿದ ಪಾಕಿಸ್ತಾನ 203 ರನ್‌ಗಳಿಗೆ ಆಲೌಟ್‌ ಆಯಿತು. ಹೊಸ ನಾಯಕ ಮೊಹಮ್ಮದ್ ರಿಜ್ವಾನ್ 44 ರನ್ ಗಳಿಸಿದ್ದೇ ಅತ್ಯಧಿಕ ಕಾಣಿಕೆ ಎನಿಸಿತು.

ವೇಗದ ಬೌಲರ್ ನಸೀಮ್ ಶಾ ಕೊನೆಯಲ್ಲಿ 39 ಎಸೆತಗಳಲ್ಲಿ ಒಂದು ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದ 40 ರನ್ ಗಳಿಸಿ ತಂಡ 200ರ ಗಡಿ ದಾಟಲು ನೆರವಾದರು.

ಸ್ಕೋರುಗಳು: ಪಾಕಿಸ್ತಾನ: 46.4 ಓವರುಗಳಲ್ಲಿ 203 (ಬಾಬರ್ ಆಜಂ 37, ಮೊಹಮ್ಮದ್ ರಿಜ್ವಾನ್ 44, ನಸೀಮ್ ಷಾ 40; ಮಿಚೆಲ್ ಸ್ಟಾರ್ಕ್ 33ಕ್ಕೆ3, ಪ್ಯಾಟ್‌ ಕಮಿನ್ಸ್‌ 39ಕ್ಕೆ2); ಆಸ್ಟ್ರೇಲಿಯಾ: 33.3 ಓವರುಗಳಲ್ಲಿ 8 ವಿಕೆಟ್‌ಗೆ 204 (ಸ್ಟೀವ್‌ ಸ್ಮಿತ್ 44, ಜೋಸ್ ಇಂಗ್ಲಿಸ್‌ 49, ಪ್ಯಾಟ್‌ ಕಮಿನ್ಸ್ ಔಟಾಗದೇ 32; ಶಾಹಿನ್ ಶಾ ಅಫ್ರೀದಿ 43ಕ್ಕೆ2, ಹ್ಯಾರಿಸ್‌ ರವೂಫ್ 67ಕ್ಕೆ3). ಪಂದ್ಯದ ಆಟಗಾರ: ಮಿಚೆಲ್ ಸ್ಟಾರ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.