ADVERTISEMENT

ಪ್ಯಾಟ್ ಕಮಿನ್ಸ್ | ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ನಾಯಕರಾದ ಮೊದಲ ವೇಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2022, 6:58 IST
Last Updated 18 ಅಕ್ಟೋಬರ್ 2022, 6:58 IST
ಪ್ಯಾಟ್‌ ಕಮಿನ್ಸ್‌
ಪ್ಯಾಟ್‌ ಕಮಿನ್ಸ್‌   

ಮೆಲ್ಬರ್ನ್‌: ಆ್ಯರನ್‌ ಫಿಂಚ್‌ ವಿದಾಯ ಘೋಷಣೆ ಬಳಿಕ ತೆರವಾಗಿದ್ದ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ ತಂಡದ ನಾಯಕ ಸ್ಥಾನಕ್ಕೆ ವೇಗದ ಬೌಲರ್‌ ಹಾಗೂ ಟೆಸ್ಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಈ ವಿಚಾರವನ್ನು 'ಕ್ರಿಕೆಟ್‌ ಆಸ್ಟ್ರೇಲಿಯಾ' (ಸಿಎ) ಖಚಿತ ಪಡಿಸಿದ್ದು, ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ಕಮಿನ್ಸ್‌ ತಂಡ ಮುಂದುವರಿಸಲಿದ್ದಾರೆ ಎಂದು ಪ್ರಕಟಿಸಿದೆ.

ಕಮಿನ್ಸ್‌ ಅವರು ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಿಚೇಲ್‌ ಮಾರ್ಶ್‌ ಹಾಗೂ ಅಲೆಕ್ಸ್‌ ಕಾರಿ ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಏಕದಿನ ತಂಡದ 27ನೇ ನಾಯಕರಾಗಿ ನೇಮಕಗೊಂಡಿದ್ದಾರೆ. ಅಷ್ಟೇ ಅಲ್ಲ, ವಿಶ್ವ ಕ್ರಿಕೆಟ್‌ನ ಈ ಬಲಿಷ್ಠ ತಂಡವನ್ನು ನಿಗದಿತ ಓವರ್‌ಗಳ (ಏಕದಿನ ಹಾಗೂ ಟಿ20) ಮಾದರಿಯಲ್ಲಿ ಮುನ್ನಡೆಸುತ್ತಿರುವ ಮೊದಲ ವೇಗಿ ಎಂಬ ಶ್ರೇಯವನ್ನೂ ಗಳಿಸಿಕೊಂಡಿದ್ದಾರೆ.

ADVERTISEMENT

ತಂಡದ ಉಪನಾಯಕ ಯಾರೆಂಬುದನ್ನು ಸಿಎ ಇನ್ನಷ್ಟೇ ಘೋಷಣೆ ಮಾಡಲಿದೆ.

'ಕಮಿನ್ಸ್‌ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಅಮೋಘ ಸಾಮರ್ಥ್ಯ ತೋರಿದ್ದಾರೆ. ಭಾರತದಲ್ಲಿ 2023ರಲ್ಲಿ ನಡೆಯುವ ವಿಶ್ವಕಪ್‌ಗೂ ಅವರನ್ನೇ ಮುಂದುವರಿಸಲು ಎದುರು ನೋಡುತ್ತಿದ್ದೇವೆ' ಎಂದು ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್‌ ಬೈಲಿ ತಿಳಿಸಿದ್ದಾರೆ.

ಮುನ್ನಲೆಗೆ ಬಂದಿದ್ದವಾರ್ನರ್‌ ಹೆಸರು
ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಸ್ಥಾನಕ್ಕೆ ಈ ಮೊದಲು ಡೇವಿಡ್‌ ವಾರ್ನರ್‌ ಹೆಸರು ಮುನ್ನಲೆಗೆ ಬಂದಿತ್ತು.

2018ರಲ್ಲಿ ಟೆಸ್ಟ್‌ ಪಂದ್ಯವೊಂದರ ಸಂದರ್ಭ ಚೆಂಡು ವಿರೂಪ ಪ್ರಕರಣ ವರದಿಯಾಗಿತ್ತು. ಇದರಲ್ಲಿಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಭಾಗಿಯಾಗಿದ್ದರು.

ಹೀಗಾಗಿ ವಾರ್ನರ್‌, ಸ್ಮಿತ್‌ ಅವರಿಗೆ ಒಂದು ವರ್ಷದವರೆಗೆ ಕ್ರಿಕೆಟ್‌ನಿಂದ ಹಾಗೂ ತಂಡದ ನಾಯಕತ್ವ ಸ್ಥಾನಗಳಿಂದ ಶಾಶ್ವತವಾಗಿ ನಿಷೇಧ ಹೇರಲಾಗಿತ್ತು. ಬ್ಯಾಂಕ್ರಾಫ್ಟ್‌ ಅನ್ನು ಒಂಬತ್ತು ತಿಂಗಳು ನಿಷೇಧಿಸಲಾಗಿತ್ತು.

ಆದಾಗ್ಯೂ, ವಾರ್ನರ್‌ ಮೇಲಿನ ನಿಷೇಧ ತೆರವುಗೊಳಿಸಿ, ಅವರನ್ನುಏಕದಿನ ಕ್ರಿಕೆಟ್ ತಂಡದ ನಾಯಕ ಸ್ಥಾನಕ್ಕೆ ಅವರನ್ನು ಪರಿಗಣಿಸಬೇಕು ಎಂದು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ, ವಾರ್ನರ್‌ ಮೇಲಿನ ನಿಷೇಧ ತೆರವಿನ ವಿಚಾರವಾಗಿ ಮಂಡಳಿಯ ಸಮಗ್ರತೆ ಕೋಡ್‌ ಅನ್ನು ಪರಿಶೀಲಿಸಲಾಗುವುದು ಎಂದು ಸಿಎ ಅಧ್ಯಕ್ಷ ಲಾಚ್ಲಾನ್ ಹೆಂಡರ್ಸನ್‌ ಸಹ ಹೇಳಿದ್ದರು.

ಆದರೆ, ಕಮಿನ್ಸ್‌ ಅವರು ಈಗಾಗಲೇ ಟೆಸ್ಟ್‌ ತಂಡವನ್ನು ಮುನ್ನಡೆಸುತ್ತಿರುವುದರಿಂದ ಅವರನ್ನೇ ಏಕದಿನ ತಂಡಕ್ಕೂ ನಾಯಕರನ್ನಾಗಿ ಮುಂದುವರಿಸಲು ಸಿಎ ತೀರ್ಮಾನ ಕೈಗೊಂಡಿದೆ.

ಫಿಂಚ್‌ ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.

ಆಸ್ಟ್ರೇಲಿಯಾ ತಂಡ ಮುಂದಿನ ತಿಂಗಳು ಇಂಗ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ನಾಯಕರಾಗಿ ಕಮಿನ್ಸ್‌ಗೆ ಇದು ಮೊದಲ ಸರಣಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.