ADVERTISEMENT

ಪವನ್‌ ದೇಶಪಾಂಡೆ ಅಮೋಘ ಆಟಕ್ಕೆ ಜಯದ ಶ್ರೇಯ

ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿ; ಗೋವಾಗೆ ನಿರಾಸೆ; ಹೆರಂಭಗೆ ಐದು ವಿಕೆಟ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 19:32 IST
Last Updated 17 ನವೆಂಬರ್ 2019, 19:32 IST
ಪವನ್ ದೇಶಪಾಂಡೆ
ಪವನ್ ದೇಶಪಾಂಡೆ   

ವಿಶಾಖಪಟ್ಟಣ: ಪವನ್ ದೇಶಪಾಂಡೆ ಅರ್ಧಶತಕ ಮತ್ತು ಶ್ರೇಯಸ್ ಗೋಪಾಲ್ ಅವರ ಅಮೋಘ ಸ್ಪಿನ್ ಬೌಲಿಂಗ್‌ನಿಂದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಎ ಗುಂಪಿನ ಅಭಿಯಾನವನ್ನು ಗೆಲುವಿನೊಂದಿಗೆ ಮುಗಿಸಿತು.

ಭಾನುವಾರ ಗೋವಾ ವಿರುದ್ಧ 35 ರನ್‌ಗಳಿಂದ ಗೆದ್ದ ಕರ್ನಾಟಕ ತಂಡವು ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 21ರಂದು ಸೂರತ್‌ನಲ್ಲಿ ಆರಂಭವಾಗುವ ಸೂಪರ್ ಲೀಗ್ ಸುತ್ತಿನ ಮೊದಲ ಪಂದ್ಯ ನಡೆಯಲಿದೆ. ಕರ್ನಾಟಕವು ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ರಾಜಸ್ಥಾನದ ವಿರುದ್ಧ ಆಡಲಿದೆ.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬಲಗೈ ಮಧ್ಯಮವೇಗಿ ಹೇರಂಭ ಪರಬ್ (24ಕ್ಕೆ5) ಅವರ ದಾಳಿಯ ಭೀತಿಯನ್ನು ಎದುರಿಸಿತು. ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದ ಅವರು ಸಂಭ್ರಮಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್ ಮಾಡಿದ ಧಾರವಾಡ ಹುಡುಗ ಪವನ್ ದೇಶಪಾಂಡೆ (63; 32ಎಸೆತ, 1ಬೌಂಡರಿ, 5ಸಿಕ್ಸರ್) ತಂಡಕ್ಕೆ ಹೋರಾಟದ ಮೊತ್ತ ಗಳಿಸಿಕೊಟ್ಟರು. ತಂಡವು 20 ಓವರ್‌ಗಳಲ್ಲಿ 9ಕ್ಕೆ172 ರನ್ ಗಳಿಸಿತು. ಗೋವಾ ತಂಡವು 19.3 ಓವರ್‌ಗಳಲ್ಲಿ 137 ರನ್‌ ಗಳಿಸಿ ಆಲೌಟ್ ಆಯಿತು. ಸ್ಪಿನ್ನರ್ ಶ್ರೇಯಸ್ ಮೂರು ಪ್ರಮುಖ ವಿಕೆಟ್ ಕಿತ್ತು ಗೋವಾ ತಂಡಕ್ಕೆ ಪೆಟ್ಟು ಕೊಟ್ಟರು. ಮಿಥುನ್, ರೋನಿತ್ ಮತ್ತು ಪವನ್ ದುಬೆ ತಲಾ ಎರಡು ವಿಕೆಟ್ ಗಳಿಸಿದರು. ಗೋವಾದ ಆರಂಭಿಕ ಬ್ಯಾಟ್ಸ್‌ಮನ್ ಆದಿತ್ಯ ಕೌಶಿಕ್ (48 ರನ್) ಅವರ ಹೋರಾಟಕ್ಕೆ ಜಯದ ಫಲ ಲಭಿಸಲಿಲ್ಲ.

ADVERTISEMENT

ಗುಂಪಿನಲ್ಲಿ ಒಟ್ಟು 20 ಪಾಯಿಂಟ್ಸ್‌ ಗಳಿಸಿದ ಕರ್ನಾಟಕ ಮತ್ತು ಬರೋಡಾ ತಂಡಗಳು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದವು. ಬರೋಡಾಗಿಂತ (+1.351) ಕರ್ನಾಟಕದ (+2.052) ರನ್‌ರೇಟ್ ಹೆಚ್ಚಿದ್ದ ಕಾರಣ ಪ್ರಥಮವಾಯಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 9ಕ್ಕೆ172(ಕೆ.ಎಲ್. ರಾಹುಲ್ 34, ಕರುಣ್ ನಾಯರ್ 21, ಪವನ್ ದೇಶಪಾಂಡೆ 63, ಹೆರಂಭ ಪರಬ್ 24ಕ್ಕೆ5, ಅಮೂಲ್ಯ ಪಂಡ್ರೆಕರ್ 35ಕ್ಕೆ2) ಗೋವಾ: 19.3 ಓವರ್‌ಗಳಲ್ಲಿ 137 (ಆದಿತ್ಯ ಕೌಶಿಕ್ 48, ಮಲಿಕ್‌ಸಾಬ್ ಶಿರೂರ್ 27, ಸುಯಶ್ ಪ್ರಭುದೇಸಾಯಿ 28, ಅಭಿಮನ್ಯು ಮಿಥುನ್ 24ಕ್ಕೆ2, ರೋನಿತ್ ಮೋರೆ 24ಕ್ಕೆ2, ಪ್ರವೀಣ ದುಬೆ 30ಕ್ಕೆ2, ಶ್ರೇಯಸ್ ಗೋಪಾಲ್14ಕ್ಕೆ3) ಫಲಿತಾಂಶ: ಕರ್ನಾಟಕ ತಂಡಕ್ಕೆ 35 ರನ್‌ಗಳ ಜಯ. ಮುಂದಿನ ಪಂದ್ಯ: ನವೆಂಬರ್ 21ರಂದು, ರಾಜಸ್ಥಾನ ಎದುರು (ಸ್ಥಳ: ಸೂರತ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.