ಮುಲ್ಲನ್ಪುರ(ಚಂಡೀಗಢ): ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಯಲ್ಸ್ ರೋಚಕ ಗೆಲುವು ದಾಖಲಿಸಿತು.
ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಬೌಲರ್ಗಳ ಸ್ನೇಹಿಯಾಗಿದ್ದ ಪಿಚ್ನಲ್ಲಿ ಎರಡೂ ತಂಡಗಳು ವೇಗವಾಗಿ ರನ್ ಗಳಿಸಲು ಪರದಾಡಿದವು.
ಮೊದಲು ಆಡಲು ಕಳುಹಿಸಲ್ಪಟ್ಟ ಪಂಜಾಬ್ 20 ಓವರುಗಳಲ್ಲಿ 8 ವಿಕೆಟ್ಗೆ 147 ರನ್ಗಳ ಸಾಧಾರಣ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ ರಾಯಲ್ಸ್ ತಂಡ ಉತ್ತಮ ಆರಂಭ ಮಾಡಿದರೂ ಮಧ್ಯಮ ಹಂತದಲ್ಲಿ ಪರದಾಡಿ ಕೊನೆಗೆ ಒಂದು ಎಸೆತ ಇರುವಂತೆ 7 ವಿಕೆಟ್ಗೆ 152 ರನ್ ಹೊಡೆಯಿತು.
ರಾಜಸ್ಥಾನ್ ರಾಯಲ್ಸ್ ತಂಡದ ಶಿಮ್ರೋನ್ ಹೆಟ್ಮೆಯರ್ ಕೊನೆಗಳಿಗೆಯ ಬೀಸಾಟದಿಂದ ಅಜೇಯ 27 ರನ್ ಸಿಡಿಸಿದರು.
ರಾಜಸ್ಥಾನ್ ರಾಯಲ್ಸ್ನ ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 39 ರನ್ ಬಾರಿಸಿದರು. ಎರಡು ಇನ್ನಿಂಗ್ಸ್ಗಳ ಪೈಕಿ ಇವರೇ ಹೆಚ್ಚು ರನ್ ಹೊಡೆದರು.
ಪಂಜಾಬ್ ಕಿಂಗ್ಸ್ನ ಸ್ಯಾಮ್ ಕರನ್ 19ನೇ ಓವರ್ನಲ್ಲಿ ಎರಡು ಬೌಂಡರಿ ನೀಡಿದರೂ, ಎರಡು ವಿಕೆಟ್ (ರೋವ್ಮನ್ ಪಾವೆಲ್ ಮತ್ತು ಕೇಶವ ಮಹಾರಾಜ್) ಪಡೆದ ಕಾರಣ ಪಂದ್ಯ ರೋಚಕವಾಯಿತು.
ರಾಯಲ್ಸ್ ತಂಡಕ್ಕೆ ತನುಷ್ ಕೋಟ್ಯಾನ್ ಮತ್ತು ಯಶಸ್ವಿ ಜೈಸ್ವಾಲ್ 8 ಓವರುಗಳಲ್ಲಿ 56 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು.
ವೇಗಿಗಳಾದ ರಬಡ, ಆವೇಶ್ ಖಾನ್, ಸ್ಯಾಮ್ ಕರನ್ ಮತ್ತು ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ತಲಾ ಎರಡು ವಿಕೆಟ್ ಪಡೆದರು
ಇನಿಂಗ್ಸ್ನ ಕೊನೆಯ ಹಂತದಲ್ಲಿ ‘ಇಂಪ್ಯಾಕ್ಟ್ ಸಬ್’ ಅಶುತೋಷ್ ಶರ್ಮಾ 31 ರನ್ ಸಿಡಿಸಿ ತಮಗೆ ಕೊಟ್ಟ ಕೆಲಸವನ್ನು ಉತ್ತಮವಾಗಿಯೇ ನಿರ್ವಹಿಸಿದರು.
ವಿಕೆಟ್ ಕೀಪರ್ ಜಿತೇಶ್ ಶರ್ಮಾ 29ರನ್ ಹೊಡೆದು ಉಪಯುಕ್ತ ಆಟವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.