ಮ್ಯಾಂಚೆಸ್ಟರ್: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಪಾಕಿಸ್ತಾನಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ನೀಡಿದೆ.
ಈ ಕುರಿತು ಐಸಿಸಿ ಅಧಿಕಾರಿಗಳು ವಾಹಿನಿಗೆ ಎಚ್ಚರಿಕೆ ನೀಡಿದ್ದಾರೆ. ಬಿಸಿಸಿಐ ಈ ಕುರಿತು ಮೌನ ವಹಿಸಿದೆ.
‘ಪಿಸಿಬಿಯ ಪರವಾಗಿ ಎಹ್ಸಾನ್ ಮನಿ ಅವರು ಐಸಿಸಿಗೆ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ದೂರು ಲಿಖಿತವಾಗಿದೆಯೋ ದೂರವಾಣಿ ದೂರವಾಣಿ ಮೂಲಕ ಸಲ್ಲಿಸಲಾಗಿದೆಯೋ ಗೊತ್ತಿಲ್ಲ’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದರು.
ಭಾರತ ವಿರುದ್ಧದ ಪಂದ್ಯದ ಕುರಿತ ‘ಮೌಕಾ ಮೌಕಾ’ ಎಂಬ ಜಾಹೀರಾತಿನಲ್ಲಿ ಭಾರತದ ಅಭಿಮಾನಿಗಳು ಪಾಕ್ ಅಭಿಮಾನಿಗಳನ್ನು ಹೀಯಾಳಿಸುವಂತೆ ಚಿತ್ರಿಸಲಾಗಿದೆ ಎಂದು ಪಿಸಿಬಿ ದೂರಿನಲ್ಲಿ ಹೇಳಿದೆ ಎನ್ನಲಾಗಿದೆ. ವಿಶ್ವಕಪ್‌ನಲ್ಲಿ ಭಾರತ ಎದುರಿನ ಆರೂ ಪಂದ್ಯಗಳನ್ನು ಪಾಕಿಸ್ತಾನ ಸೋತಿರುವುದು ಜಾಹೀರಾತಿನ ತಿರುಳು.
ಜಾಹೀರಾತಿನಲ್ಲಿ, ಬಾಂಗ್ಲಾದೇಶದ ಕ್ರಿಕೆಟ್ ಪ್ರೇಮಿಯೊಬ್ಬ ಪಾಕಿಸ್ತಾನದ ಅಭಿಮಾನಿಯೊಂದಿಗೆ ಮಾತನಾಡುತ್ತ ಭಾರತ ವಿರುದ್ಧದ ಪಂದ್ಯದ ಬಗ್ಗೆ ಅಭಿಪ್ರಾಯ ಕೇಳುತ್ತಾನೆ. ಆಗ ಪಾಕ್ ಅಭಿಮಾನಿ ‘ಮರಳಿ ಯತ್ನವ ಮಾಡು ಎಂದು ನನ್ನ ಅಪ್ಪ ಹೇಳಿದ್ದಾರೆ’ ಎನ್ನುತ್ತಾನೆ. ಪಕ್ಕದಲ್ಲಿರುವ ಭಾರತದ ಅಭಿಮಾನಿ ನಾನು ಯಾವತ್ತೂ ಹಾಗೆ ಹೇಳಲಿಲ್ಲ ಎನ್ನುತ್ತಾನೆ.
ಭಾರತದ ವಾಹಿನಿ ಮಾನ್ಯತೆ ರದ್ದು: ಭಾರತದ ವಾಹಿನಿಯೊಂದರ ಪ್ರತಿನಿಧಿಗಳು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರ ಮಾನ್ಯತೆಯನ್ನು ರದ್ದು ಮಾಡಲಾಗಿದೆ. ವಾಹಿನಿಯ ವರದಿಗಾರ ಮತ್ತು ಕ್ಯಾಮರಾಮನ್ ಕೊಹ್ಲಿ ಅವರ ಪಂದ್ಯಪೂರ್ವ ಪತ್ರಿಕಾಗೋಷ್ಠಿಯ ನೇರ ಪ್ರಸಾರ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕೊಹ್ಲಿ ಪತ್ರಿಕಾಗೋಷ್ಠಿಯನ್ನು ಫೇಸ್ ಬುಕ್ ಲೈವ್ ಮೂಲಕ ತೋರಿಸಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.