ADVERTISEMENT

ವಿಶ್ವಕಪ್‌ನಿಂದ ಹೊರಬಿದ್ದ ಪಾಕ್: ಮುಜುಗರಕ್ಕೀಡಾದ ಪಿಸಿಬಿಯಿಂದ ಹೊಸ ನಿಯಮ ಜಾರಿ

ಪಿಟಿಐ
Published 15 ಜೂನ್ 2024, 9:34 IST
Last Updated 15 ಜೂನ್ 2024, 9:34 IST
<div class="paragraphs"><p>ಭಾರತ ವಿರುದ್ಧದ ಪಂದ್ಯದಲ್ಲಿ ಸೋಲು ಎದುರಾದಾಗ ಪಾಕಿಸ್ತಾನ ಆಟಗಾರ&nbsp;ನಸೀಂ ಶಾ&nbsp;ಕಣ್ಣೀರು ಹಾಕಿದರು. ಅವರೊಂದಿಗೆ ಶಾಹೀನ್‌ ಶಾ ಅಫ್ರಿದಿ ಇದ್ದಾರೆ.</p></div>

ಭಾರತ ವಿರುದ್ಧದ ಪಂದ್ಯದಲ್ಲಿ ಸೋಲು ಎದುರಾದಾಗ ಪಾಕಿಸ್ತಾನ ಆಟಗಾರ ನಸೀಂ ಶಾ ಕಣ್ಣೀರು ಹಾಕಿದರು. ಅವರೊಂದಿಗೆ ಶಾಹೀನ್‌ ಶಾ ಅಫ್ರಿದಿ ಇದ್ದಾರೆ.

   

ಪಿಟಿಐ ಚಿತ್ರ

ಕರಾಚಿ: ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದ ಬೆನ್ನಲ್ಲೇ, ಪಾಕ್‌ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನಿಯಮವನ್ನು ಪರಿಚಯಿಸಿದೆ.

ADVERTISEMENT

ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿರುವ ಪಾಕಿಸ್ತಾನ ತಂಡವು ಗುಂಪು ಹಂತದಲ್ಲೇ ಹೊರಬಿದ್ದಿದೆ. ಬದ್ಧ ಎದುರಾಳಿ ಭಾರತದ ವಿರುದ್ಧ ಮಾತ್ರವಲ್ಲದೆ, 'ಕ್ರಿಕೆಟ್‌ ಶಿಶು' ಅಮೆರಿಕ ಎದುರೂ ಸೋಲು ಅನುಭವಿಸಿದೆ. ಇದರಿಂದ ತೀವ್ರ ಮುಜುಗರಕ್ಕೀಡಾಗಿರುವ ಪಿಸಿಬಿ ಹೊಸ ನಿಯಮ ರೂಪಿಸಿದೆ.

ಪಾಕ್‌ ಪಡೆ ಗುಂಪು ಹಂತದ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಷ್ಟೇ ಜಯ ಸಾಧಿಸಿದೆ. ಇದರಲ್ಲಿ ಒಂದು ಗೆಲುವು ಹಾಗೂ ಎರಡು ಸೋಲು ಅನುಭವಿಸಿದೆ.

ಮೊದಲ ಪಂದ್ಯದಲ್ಲಿ (ಜೂನ್‌ 6) ಆತಿಥೇಯ ಅಮೆರಿಕ ವಿರುದ್ಧ ಸೂಪರ್‌ ಓವರ್‌ನಲ್ಲಿ ಮುಗ್ಗರಿಸಿದ ಬಾಬರ್‌ ಅಜಂ ಬಳಗ, ಎರಡನೇ ಪಂದ್ಯದಲ್ಲಿ (ಜೂನ್‌ 9) ಭಾರತದ ವಿರುದ್ಧ ಸೋತಿತ್ತು. ಮೂರನೇ ಪಂದ್ಯದಲ್ಲಿ (ಜೂನ್‌ 11) ಕೆನಡಾ ವಿರುದ್ಧ ಗೆದ್ದಿದೆ. ಅಂತಿಮ ಪಂದ್ಯವು ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೂ, ಪಾಕ್‌ ಪಡೆ ಪ್ರಶಸ್ತಿ ರೇಸ್‌ನಲ್ಲಿ ಉಳಿಯುವ ಅವಕಾಶ ಕಳೆದುಕೊಂಡಿದೆ.

ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಮತ್ತು 4 ಪಂದ್ಯಗಳಿಂದ ಎರಡು ಗೆಲುವು ಸಹಿತ 5 ಪಾಯಿಂಟ್‌ ಕಲೆಹಾಕಿರುವ ಅಮೆರಿಕ 'ಸೂಪರ್‌ 8' ಹಂತಕ್ಕೆ ಸ್ಥಾನ ಖಚಿತಪಡಿಸಿಕೊಂಡಿದೆ.

ಪಾಕ್‌ ನಿಯಮ
ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಎಲ್ಲ ಆಟಗಾರರು ವರ್ಷವೊಂದರಲ್ಲಿ ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಹೊರತುಪಡಿಸಿ, ವಿದೇಶಗಳಲ್ಲಿ ನಡೆಯುವ ಎರಡು ಟಿ20 ಲೀಗ್‌ಗಳಲ್ಲಿ ಮಾತ್ರ ಭಾಗವಹಿಸಬಹುದಾಗಿದೆ. ವಿದೇಶಗಳಲ್ಲಿ ನಡೆಯುವ ಲೀಗ್‌ಗಳಿಗೆ ಸಂಬಂಧಿಸಿದಂತೆ ಮಂಡಳಿಯು ಎರಡು ಎನ್‌ಒಸಿಗಳನ್ನು ನೀಡುತ್ತದೆ. ಈ ನಿಯಮಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಪಿಸಿಬಿ ಸೂಚಿಸಿದೆ.

ವಿಶ್ವಕಪ್‌ನಲ್ಲಿ ಪಾಲ್ಗೊಂಡ ತಂಡದ ಭಾಗವಾಗಿದ್ದ ಯುವ ಆಟಗಾರರಾದ ಅಜಂ ಖಾನ್‌ ಮತ್ತು ಸೈಮ್ ಆಯೂಬ್‌ ಅವರಿಗೆ ಮಂಡಳಿಯು ಈವರೆಗೆ ಎನ್‌ಒಸಿ ನೀಡಿಲ್ಲ.

'ದೇಶಿ ಕ್ರಿಕೆಟ್‌ ಹಾಗೂ ಕೇಂದ್ರೀಯ ಗುತ್ತಿಗೆಗೆ ಸಹಿ ಮಾಡಿರುವ ಉಳಿದೆಲ್ಲ ಆಟಗಾರರಿಗೆ ಎರಡು ಎನ್‌ಒಸಿ ನಿಯಮ ಅನ್ವಯವಾಗುತ್ತದೆ. ಅಷ್ಟೇ ಅಲ್ಲದೆ, ಯಾವುದೇ ಆಟಗಾರ ಎನ್‌ಒಸಿಗಾಗಿ ಸಲ್ಲಿಸುವ ಮನವಿಯನ್ನು ತಡೆಹಿಡಿಯುವ ಹಕ್ಕು ಪಿಸಿಬಿಗೆ ಇದೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಯಾವುದೇ ಆಟಗಾರನಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ, ಲೀಗ್‌ನಲ್ಲಿ ಆಡುವುದರಿಂದ ಫಿಟ್‌ನೆಸ್‌ ಮೇಲೆ ಪರಿಣಾಮ ಉಂಟಾಗಲಿದೆ ಎಂದಾದರೆ ಇಲ್ಲವೇ ಅಥವಾ ತವರಿನಲ್ಲಿ ಆಡುವ ಅಗತ್ಯವಿದೆ ಎನಿಸಿದರೆ ಪಿಸಿಬಿಯು, ಎನ್‌ಒಸಿ ಮನವಿಯನ್ನು ತಿರಸ್ಕರಿಸಲಿದೆ.

ಮಂಡಳಿಯಿಂದ ಪಡೆದ ಎನ್ಒಸಿ ನೀಡಿದರಷ್ಟೇ ಪಾಕ್‌ ಆಟಗಾರರಿಗೆ ತಮ್ಮ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಬೇಕು ಎಂದು ಪಿಸಿಬಿಯು ಈಗಾಗಲೇ ಎಲ್ಲ ಕ್ರಿಕೆಟ್‌ ಮಂಡಳಿಗಳು ಮತ್ತು ಫ್ರಾಂಚೈಸ್‌ಗಳಿಗೆ ಸ್ಪಷ್ಟವಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.