ADVERTISEMENT

Perth Test: ಯಶಸ್ವಿ, ಕೊಹ್ಲಿ ಆಟಕ್ಕೆ ಕಾಂಗರೂ ಪಡೆ ಕಂಗಾಲು

ಆಸ್ಟ್ರೇಲಿಯಾಕ್ಕೆ 534 ರನ್ ಗುರಿ* 3 ವಿಕೆಟ್‌ಗೆ 12

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:31 IST
Last Updated 24 ನವೆಂಬರ್ 2024, 15:31 IST
<div class="paragraphs"><p>ವಿರಾಟ್‌ ಕೊಹ್ಲಿ</p></div>

ವಿರಾಟ್‌ ಕೊಹ್ಲಿ

   

ಪರ್ತ್‌: ಭಾರತ ತಂಡಕ್ಕೆ ಏನೇನು ಸಮಸ್ಯೆಗಳು ಎದುರಾಗಿದ್ದವೊ, ಅವೆಲ್ಲವೂ ಆಸ್ಟ್ರೇಲಿಯಾಕ್ಕೆ ಕಾಲಿಡುವ ಮೊದಲೇ ಆಗಿದ್ದವು. ತವರಿನಲ್ಲಿ ನ್ಯೂಜಿಲೆಂಡ್ ಎದುರು ಮನೋಬಲ ಕುಗ್ಗಿಸುವ ರೀತಿ 3–0  ಸರಣಿ ಸೋಲು, ಬಿಜಿಟಿ ಸರಣಿಗೆ ಅನುಭವಿ ಬೌಲರ್‌ ಶಮಿ ಅವರ ಬಹುನಿರೀಕ್ಷಿತ ಪುನರಾಗಮನ ವಿಳಂಬ, ರೋಹಿತ್ ಶರ್ಮಾ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದು, ತಾರಾ ಆಟಗಾರ ವಿರಾಟ್‌ ಕೊಹ್ಲಿ ದೀರ್ಘ ಪರದಾಟ ಮುಂದುವರಿದಿದ್ದು.....

ಮೂರನೇ ಕ್ರಮಾಂಕಕ್ಕೆ ಮೊದಲ ಆಯ್ಕೆಯಾದ ಬ್ಯಾಟರ್ ಶುಭಮನ್ ಗಿಲ್ ಇಲ್ಲಿಗೆ ಬಂದಿಳಿದ ಮೇಲೆ ಎಡಗೈ ಹೆಬ್ಬೆರಳಿಗೆ ಗಾಯಮಾಡಿಕೊಂಡರು. ಈ ಎಲ್ಲ ಬೆಳವಣಿಗೆಗಳು ಭಾರತದ ಮೇಲುಗೈ ನಿರೀಕ್ಷಿಸುವಂತೆಯೇ ಇರಲಿಲ್ಲ. ಸಾಲದ್ದಕ್ಕೆ ಮೊದಲ ಇನಿಂಗ್ಸ್‌ನಲ್ಲಿ ತಂಡ 150 ರನ್ನಿಗೆ ಉರುಳಿತು. ಪರ್ತ್‌ನ ಒಪ್ಟಸ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಬೇಗನೇ ಪಂದ್ಯ ಮುಗಿಸಬಹುದೆಂಬ ಅಭಿಪ್ರಾಯಗಳಿದ್ದವು. ಆದರೆ ಭಾರತದ ನಿರೀಕ್ಷೆ ಮೀರಿ ಭಾರತ ತಿರುಗೇಟು ನೀಡಿತು. ಮೊದಲು ಬೌಲರ್‌ಗಳು ಮೇಲುಗೈ ಒದಗಿಸಿಕೊಟ್ಟರೆ, ನಂತರ ಬ್ಯಾಟರ್‌ಗಳ ಅಬ್ಬರ ನಿರ್ಣಾಯಕ ಮೇಲುಗೈ ದೊರಕಿಸಿಕೊಟ್ಟಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಈಗ ಭಾರತ ಗೆಲುವಿನ ಹಾದಿಯಲ್ಲಿದೆ.

ADVERTISEMENT

ಶನಿವಾರ ಅಜೇಯರಾಗುಳಿದಿದ್ದ ಯಶಸ್ವಿ ಜೈಸ್ವಾಲ್ (161, 297ಎ, 4x15, 6x3) ಮತ್ತು ಕೆ.ಎಲ್‌.ರಾಹುಲ್‌ ಮೊದಲು ಉತ್ತಮ ಆರಂಭ ನೀಡಿದ್ದರು. ಭಾನುವಾರ ವಿರಾಟ್ ಕೊಹ್ಲಿ ಅಜೇಯ ಶತಕ (100, 143ಎ, 4x8) ದಾಖಲಿಸಿದರು.

ಕೊಹ್ಲಿ ಶತಕ ಪೂರೈಸಿದಾಗ, 6 ವಿಕೆಟ್‌ಗೆ 487 ರನ್‌ಗಳ ಭಾರಿ ಮೊತ್ತ ತಲುಪಿದ್ದ ಭಾರತ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತು. 46 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸೇರಿದರೆ, ಆಸ್ಟ್ರೇಲಿಯಾಕ್ಕೆ 534 ರನ್‌ಗಳ ಬೃಹತ್ ಗುರಿ.

ಕೊಹ್ಲಿ ಸಾಧನೆ: ಲಯಕ್ಕೆ ಮರಳಲು ಪರದಾಡಿದ್ದ ಕೊಹ್ಲಿ ಅವರಿಗೆ ಇದು ಟೆಸ್ಟ್‌ನಲ್ಲಿ 30ನೇ ಶತಕ. ಮಾರ್ನಸ್‌ ಲಾಬುಷೇನ್ ಬೌಲಿಂಗ್‌ನಲ್ಲಿ ಸ್ವೀಪ್ ಮೂಲಕ ಬೌಂಡರಿ ಗಳಿಸಿದ ಅವರು, ಅದು ಸೀಮಾರೇಖೆ ದಾಟಿದ್ದು ಖಚಿತವಾಗುತ್ತಿದ್ದಂತೆ, ನಟಿ–ಪತ್ನಿ ಅನುಷ್ಕಾ ಶರ್ಮಾ ಅವರತ್ತ ಮುತ್ತುಗಳನ್ನು ಹಾರಿಸಿದರು. ಕೊಹ್ಲಿ ಶತಕಕ್ಕೇ ಕಾಯುತ್ತಿದ್ದಂತೆ ಕಂಡ ನಾಯಕ ಜಸ್‌ಪ್ರೀತ್ ಬೂಮ್ರಾ ಡಿಕ್ಲೇರ್ಡ್ ಸಂದೇಶ ನೀಡಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ, ವೆಸ್ಟ್‌ ಇಂಡೀಸ್‌ 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ 418 ರನ್‌ಗಳ ಗುರಿಯನ್ನು ದಾಟಿದ್ದು ಇದುವರೆಗಿನ ಅತಿ ದೊಡ್ಡ ಚೇಸ್‌ ಎನಿಸಿದೆ. ಈಗ ಆಸ್ಟ್ರೇಲಿಯಾಕ್ಕೆ ಅದಕ್ಕೂ ಮೀರಿದ ಸವಾಲು ಎದುರಾಗಿದೆ. ಆಸ್ಟ್ರೇಲಿಯಾ ಯಶಸ್ವಿಯಾಗಿ ಸಾಧಿಸಿದ ಅತಿ ದೊಡ್ಡ ಗುರಿ ಎಂದರೆ 404. 1948ರಲ್ಲಿ ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ಬ್ರಾಡ್ಮನ್ ಅವರ ಅಜೇಯ 173 ರನ್ ನೆರವಿನಿಂದ ಆಸ್ಟ್ರೇಲಿಯಾ ಗುರಿ ಸಾಧಿಸಿತ್ತು.

ಮೂರನೇ ದಿನದ ಆಟ ಮುಗಿದಾಗ ಆಸ್ಟ್ರೇಲಿಯಾ 3 ವಿಕೆಟ್‌ಗೆ 12 ರನ್ ಗಳಿಸಿದೆ. ಇನ್ನೂ 521 ರನ್‌ಗಳಿಂದ ಹಿಂದಿದೆ. ಬೂಮ್ರಾ (2.2–1–1–2) ಎಂದಿನಂತೆ ಪರಿಣಾಮಕಾರಿಯಾಗಿದ್ದು, ಮಾರ್ನಸ್‌ ಲಾಬುಷೇನ್ ವಿಕೆಟ್‌ ಪಡೆದು ಹೊಡೆತ ನೀಡಿದರು.

ಬೆಳಿಗ್ಗೆ ಜೈಸ್ವಾಲ್– ರಾಹುಲ್ ಜೋಡಿ ಶುಕ್ರವಾರದ ಮೊತ್ತಕ್ಕೆ (ವಿಕೆಟ್‌ ನಷ್ಟವಿಲ್ಲದೇ 172) 29 ರನ್ ಸೇರಿಸಿತು. ಈ ವೇಳೆ ಸ್ಟಾರ್ಕ್ ಬೌಲಿಂಗ್‌ನಲ್ಲಿ ರಾಹುಲ್ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತರು. 63 ಓವರುಗಳಲ್ಲಿ 201 ರನ್ ಜೊತೆಯಾಟ ಪಂದ್ಯವನ್ನು ಭಾರತದ ಕಡೆಗೆ ವಾಲಿಸಿತ್ತು. ಈ ಜೋಡಿಯ ಆಟ ಪ್ರತಿಕೂಲ ಸನ್ನಿವೇಶದಲ್ಲಿ ಬಂದಿತ್ತು. ರಾಹುಲ್, ರೋಹಿತ್ ಶರ್ಮಾ ಸ್ಥಾನದಲ್ಲಿ ಅವಕಾಶ ಪಡೆದರೆ, ಜೈಸ್ವಾಲ್ ಅವರಿಗೆ ಇದು ಆಸ್ಟ್ರೇಲಿಯಾದ ನೆಲದಲ್ಲಿ ಮೊದಲ ಟೆಸ್ಟ್‌. ಆದರೆ ಇಬ್ಬರೂ ಪ್ರಬುದ್ಧ ಆಟವಾಡಿದರು.

ಜೈಸ್ವಾಲ‌್ ಅವರಿಗೆ ಇದು ವೃತ್ತಿ ಜೀವನದ ನಾಲ್ಕನೇ ಶತಕ. ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ ಭಾರತದ ಮೂರನೇ ಬ್ಯಾಟರ್ ಎಂಬ ಹಿರಿಮೆ ಕೂಡ ಅವರದಾಯಿತು. ಈ ಹಿಂದೆ ಈ ಗೌರವ ಪಡೆದ ಇತರ ಇಬ್ಬರು– ಎಂ.ಎಲ್‌.ಜೈಸಿಂಹ (1968ರಲ್ಲಿ) ಮತ್ತು ಸುನೀಲ್ ಗಾವಸ್ಕರ್ (1977ರಲ್ಲಿ). ವಿಶೇಷವೆಂದರೆ ಈ ಮೂರೂ ಶತಕಗಳು ಎರಡನೇ ಇನಿಂಗ್ಸ್‌ನಲ್ಲೇ ದಾಖಲಾಗಿವೆ.

ಭರ್ಜರಿ ಶತಕಗಳಿಗೆ ಹೆಸರಾದ ಜೈಸ್ವಾಲ್ (161, 297ಎ, 4x15, 6x3) ನಾಲ್ಕನೇ ಬಾರಿ 150ಕ್ಕೂ ಹೆಚ್ಚು ರನ್ ದಾಖಲಿಸಿದರು. ಈ ಹಿಂದೆ ಮುಂಬೈನ ಈ ಆಟಗಾರ ವೆಸ್ಟ್‌ ಇಂಡೀಸ್ ವಿರುದ್ಧ 171, ಇಂಗ್ಲೆಂಡ್ ವಿರುದ್ಧ 209 ಮತ್ತು ಅಜೇಯ 214 ರನ್ ಗಳಿಸಿದ್ದರು. ಅವರು ಬೇರೂರಿ ಆಡಿದರಷ್ಟೇ ಅಲ್ಲ, ಸಾಕಷ್ಟು ವೇಗದಲ್ಲಿ ರನ್‌ ಕೂಡ ಗಳಿಸಿದರು. ಅವರು ನಿರ್ಗಮಿಸುತ್ತಿದ್ದಂತೆ ಪ್ರೇಕ್ಷಕರು ಎದ್ದುನಿಂತು ಗೌರವ ಕರತಾಡನದ ಮೆಚ್ಚುಗೆ ನೀಡಿದರು. ಆಸ್ಟ್ರೇಲಿಯಾ ತಂಡಕ್ಕೆ ನೆಲಕುಸಿದ ಅನುಭವವಾಯಿತು.

ಕೊಹ್ಲಿ ಅವರಿಗೆ ಇದು ಆಪ್ಟಸ್ ಕ್ರೀಡಾಂಗಣದಲ್ಲಿ ಸತತ ಎರಡನೇ ಶತಕ. ಟೆಸ್ಟ್‌ ಪಂದ್ಯಗಳಲ್ಲಿ 30ನೇ ಹಾಗೂ ಒಟ್ಟಾರೆ 80ನೇ ಅಂತರರಾಷ್ಟ್ರೀಯ ಶತಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.