ADVERTISEMENT

ಯುವರಾಜ್‌, ಬಜ್ಜಿ ಸೇರಿ ನಾಲ್ವರ ವಿರುದ್ಧ ಪೊಲೀಸರಿಗೆ ದೂರು

ವಿಡಿಯೊದಲ್ಲಿ ಅಂಗವಿಕಲರನ್ನು ಅಣಕಿಸಿದ ಆರೋಪ

ಪಿಟಿಐ
Published 15 ಜುಲೈ 2024, 16:25 IST
Last Updated 15 ಜುಲೈ 2024, 16:25 IST
ಯುವರಾಜ್ ಸಿಂಗ್
ಯುವರಾಜ್ ಸಿಂಗ್   

ನವದೆಹಲಿ: ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊ ಒಂದರಲ್ಲಿ ಅಂಗವಿಕಲರನ್ನು ಅಣಕಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗರಾದ ಹರಭಜನ್ ಸಿಂಗ್, ಸುರೇಶ್‌ ರೈನಾ, ಯುವರಾಜ್ ಸಿಂಗ್ ಮತ್ತು ಗುರುಕೀರತ್‌ ಮಾನ್‌ ಅವರ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯೊಂದರಲ್ಲಿ ದೂರು ದಾಖಲಾಗಿದೆ.

ವಿಡಿಯೊ ಹರಿದಾಡುತ್ತಿದ್ದಂತೆ ಆಕ್ರೋಶ ಕೇಳಿಬಂದಿದೆ. ಇದರ ಬೆನ್ನಲ್ಲೇ ಹರಭಜನ್ ಅವರು ‘ಎಕ್ಸ್‌’ನಲ್ಲಿ ಸ್ಪಷ್ಟೀಕರಣ ನೀಡಿದ್ದು, ಯಾರನ್ನೂ ಅವಮಾನಿಸುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಪೋಸ್ಟ್‌ ಹಾಕಿದ್ದಾರೆ.

ಅಂಗವಿಕಲರ ರಾಷ್ಟ್ರೀಯ ಉದ್ಯೋಗಾವಕಾಶ ಉತ್ತೇಜನ ಕೇಂದ್ರದ (ಎನ್‌ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಇಲ್ಲಿನ ಅಮರ್‌ ಕಾಲೊನಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕ್ರಿಕೆಟಿಗರ ಜೊತೆ ಮೆಟಾ ಇಂಡಿಯಾದ ಉಪಾಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸಂಧ್ಯಾ ದೇವನಾಥನ್ ವಿರುದ್ಧವೂ ದೂರು ನೀಡಲಾಗಿದೆ.

ADVERTISEMENT

ಮೆಟಾ ಒಡೆತನದಲ್ಲಿರುವ ಇನ್‌ಸ್ಟಾಗ್ರಾಮ್, ಇಂಥ ವಿಷಯದ ವಿಡಿಯೊಕ್ಕೆ ಅವಕಾಶ ಕಲ್ಪಿಸುವ ಮೂಲಕ ಮಾಹಿತಿ ತಂತ್ರಜ್ಞಾನ ಕಾಯ್ದೆ (2000) ಉಲ್ಲಂಘಿಸಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ದೂರು ದಾಖಲಾಗಿರುವುದನ್ನು ಖಚಿತಪಡಿಸಿರುವ ಪೊಲೀಸ್‌ ಅಧಿಕಾರಿಯೊಬ್ಬರು, ಮತ್ತಷ್ಟು ತನಿಖೆಗೆ ಜಿಲ್ಲೆಯ ಸೈಬರ್‌ ಸೆಲ್‌ ಜೊತೆ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.

ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತ ಚಾಂಪಿಯನ್ಸ್ ತಂಡ ಭಾನುವಾರ ಐದು ವಿಕೆಟ್‌ಗಳಿಂದ ಪಾಕಿಸ್ತಾನ ಚಾಂಪಿಯನ್ಸ್‌ ಮೇಲೆ ಗೆದ್ದ ನಂತರ ಈ ಮೂವರು ಆಟಗಾರರು ವಿಡಿಯೊ ಶೇರ್ ಮಾಡಿದ್ದರು. ವಿಡಿಯೊದಲ್ಲಿ ಯುವರಾಜ್‌, ಹರಭಜನ್ ಮತ್ತು ರೈನಾ ಕುಂಟುತ್ತಿದ್ದು, ಬಾಗಿ ನಡೆಯುತ್ತಿರುವ ದೃಶ್ಯವಿದೆ. ಪಂದ್ಯಗಳಿಂದ ತಮ್ಮ ದೇಹದ ಮೇಲಾಗಿರುವ ಸುಸ್ತನ್ನು ಸೂಚ್ಯವಾಗಿ ಹೊರಹಾಕಿದ್ದಾರೆ.

15 ದಿನಗಳ ಲೆಜೆಂಡ್‌ ಕ್ರಿಕೆಟ್‌ ಆಡಿ ದೇಹ ಬಳಲಿ ಬೆಂಡಾಗಿದೆ. ತೋಬಾ.. ತೋಬಾ ಎನ್ನುವ ಅರ್ಥದ ಶೀರ್ಷಿಕೆಯನ್ನು ನೀಡಲಾಗಿದೆ.

ವಿಡಿಯೊ ಕೀಳು ಅಭಿರುಚಿಯಿಂದ ಕೂಡಿದೆ ಎಂದು ಅಂಗವಿಕಲರ ಹಕ್ಕುಗಳಿಗೆ ಹೋರಾಡುತ್ತಿರುವವರು ದೂರಿದ್ದಾರೆ. ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಇದು ಎಂದಿದ್ದಾರೆ. ಈ ವಿಧಿಯು ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡುತ್ತದೆ.

‘ಕ್ರಿಕೆಟಿಗರು ಬರೇ ಕ್ಷಮೆ ಕೇಳಿದರೆ ಸಾಲದು. ಅವರ ಈ ಕೃತ್ಯಕ್ಕಾಗಿ ಶಿಕ್ಷೆ ಅನುಭವಿಸಬೇಕು’ ಎಂದು ಅಲಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ನಾವು ಯಾರದೇ ಭಾವನೆಯನ್ನು ನೋಯಿಸಲು ಬಯಸಿಲ್ಲ. ನಾವು ಪ್ರತಿಯೊಬ್ಬರನ್ನೂ ಮತ್ತು ಪ್ರತಿ ಸಮುದಾಯವನ್ನು ಗೌರವಿಸುತ್ತೇವೆ. 15 ದಿನಗಳ ಕ್ರಿಕೆಟ್‌ ಆಟದಿಂದ ದೇಹದ ಮೇಲಾದ ಪರಿಣಾಮ ತೋರಿಸುವ ಉದ್ದೇಶವಷ್ಟೇ ಇದರ ಹಿಂದಿತ್ತು’ ಎಂದು ಹರಭಜನ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.