ಮುಂಬೈ: ಬೌಲಿಂಗ್ ಬದಲಾವಣೆಯಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳದೇ ಇದ್ದುದೇ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಸೋಲನುಭವಿಸಲು ಕಾರಣ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ 148 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ 42 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿತ್ತು. ಆದರೆ ನಂತರ ಚೇತರಿಸಿಕೊಂಡ ರಾಯಲ್ಸ್ ಮೂರು ವಿಕೆಟ್‌ಗಳ ಗೆಲುವು ಸಾಧಿಸಿತ್ತು.
ಪಂದ್ಯದ ನಂತರ ಮಾತನಾಡಿದ ರಿಕಿ ಪಾಂಟಿಂಗ್ ಅವರು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಅವರ ಪೂರ್ಣ ಕೋಟಾದ ಬೌಲಿಂಗ್ ಮಾಡಲು ಅವಕಾಶ ನೀಡಬೇಕಾಗಿತ್ತು ಎಂದು ಹೇಳಿದರು. ಮೂರು ಓವರ್ ಬೌಲಿಂಗ್ ಮಾಡಿದ್ದ ಅಶ್ವಿನ್ ಕೇವಲ 14 ರನ್ ಬಿಟ್ಟುಕೊಟ್ಟಿದ್ದರು. ಇದರಲ್ಲಿ ಒಂದು ಬೌಂಡರಿ ಕೂಡ ಇರಲಿಲ್ಲ.
ಎಡಗೈ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ಮಿಲ್ಲರ್ (62; 43 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ರಾಹುಲ್ ತೆವಾಥಿಯಾ ಕ್ರೀಸ್‌ನಲ್ಲಿದ್ದಾಗ 13ನೇ ಓವರ್‌ನಲ್ಲಿ ನಾಯಕ ರಿಷಭ್ ಪಂತ್ ಅವರು ಅಶ್ವಿನ್ ಬದಲಿಗೆ ಮಾರ್ಕಸ್ ಸ್ಟೋಯಿನಿಸ್ ಕೈಗೆ ಚೆಂಡು ನೀಡಿದ್ದರು. ಸ್ಟೋಯಿನಿಸ್ ಮೂರು ಬೌಂಡರಿ ಒಳಗೊಂಡಂತೆ ಒಟ್ಟು 15 ರನ್ ಬಿಟ್ಟುಕೊಟ್ಟಿದ್ದರು. ಇದು ರಾಯಲ್ಸ್‌ಗೆ ಚೇತರಿಕೆ ತುಂಬಿತ್ತು.
‘ಅಶ್ವಿನ್ ಬದಲಿಗೆ ಸ್ಟೋಯಿನಿಸ್‌ಗೆ ಬೌಲಿಂಗ್ ನೀಡಿದ್ದು ಸರಿಯಾದ ಕ್ರಮವಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗದ ಅಶ್ವಿನ್ ನಂತರ ಕಠಿಣ ಪರಿಶ್ರಮದ ಮೂಲಕ ಪರಿಸ್ಥಿತಿಗೆ ಹೊಂದಿಕೊಂಡಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಉತ್ತಮ ದಾಳಿ ನಡೆಸಿದ್ದರು’ ಎಂದು ಪಾಂಟಿಂಗ್ ಹೇಳಿದರು.
ಕೊನೆಯ ಐದು ಓವರ್‌ಗಳಲ್ಲಿ ರಾಯಲ್ಸ್ ಗೆಲುವಿಗೆ 58 ರನ್‌ಗಳು ಬೇಕಾಗಿದ್ದವು. ಕೊನೆಯ ಎರಡು ಓವರ್‌ಗಳಲ್ಲಿ ಕ್ರಿಸ್ ಮೊರಿಸ್ ಒಟ್ಟು ನಾಲ್ಕು ಸಿಕ್ಸರ್ ಸಿಡಿಸಿದ್ದರು. 18 ಎಸೆತಗಳಲ್ಲಿ 36 ರನ್ ಗಳಿಸಿದ ಅವರು ಗೆಲುವಿನ ರೂವಾರಿ ಎನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.