ADVERTISEMENT

‘ಜವಾಬ್ದಾರಿಯನ್ನು ಪಕ್ಕಕ್ಕಿಟ್ಟರೆ ಆಯ್ಕೆ ಸಮಿತಿ ಸದಸ್ಯರೂ ಧೋನಿ ಅಭಿಮಾನಿಗಳೇ’

ನಿರ್ಧಾರದ ಬಗ್ಗೆ ಧೋನಿಯನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ: ಎಂಎಸ್‌ಕೆ ಪ್ರಸಾದ್‌

ಏಜೆನ್ಸೀಸ್
Published 14 ಡಿಸೆಂಬರ್ 2019, 14:24 IST
Last Updated 14 ಡಿಸೆಂಬರ್ 2019, 14:24 IST
   

ನವದೆಹಲಿ:ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ನಿವೃತ್ತಿ ನಿರ್ಧಾರ ಸಂಬಂಧ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್, ಧೋನಿಯರನ್ನು ಯಾರೊಬ್ಬರೂಪ್ರಶ್ನಿಸುವಂತಿಲ್ಲ. ವೃತ್ತಿಪರ ಜವಾಬ್ದಾರಿಗಳನ್ನು ಪಕ್ಕಕ್ಕಿಟ್ಟರೆ ಆಯ್ಕೆ ಸಮಿತಿಯಲ್ಲಿರುವ ಎಲ್ಲರೂ ಧೋನಿ ಅಭಿಮಾನಿಗಳೇ ಎಂದು ಹೇಳಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಭಾರತವು ಸೋಲು ಕಂಡ ಬಳಿಕ, ಕಳೆದ ನಾಲ್ಕು ತಿಂಗಳಿನಿಂದ ಧೋನಿ ಭಾರತ ತಂಡದ ಪರ ಕಣಕ್ಕಿಳಿದಿಲ್ಲ. ಕ್ರಿಕೆಟ್‌ನಿಂದಲೂ ದೂರ ಉಳಿದಿದ್ದಾರೆ. ಹೀಗಾಗಿ ಧೋನಿ ಕ್ರಿಕೆಟ್‌ ಭವಿಷ್ಯ ಕುರಿತು ಚರ್ಚೆಗಳು ನಡೆಯುತ್ತಿವೆ.

ಈ ಸಂಬಂಧ ಮಾತನಾಡಿರುವ ಪ್ರಸಾದ್‌, ‘ಮಹಿ (ಧೋನಿ) ಇನ್ನೂ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿಲ್ಲ. ಆ ಸಂಬಂಧ ಅವರಿಗೆ ಆಯ್ಕೆಗಳು ಮುಕ್ತವಾಗಿವೆ. ಅವರು ತಂಡದ ಆಹ್ವಾನ ಸ್ವೀಕರಿಸಲಿದ್ದಾರೆ. ಆದರೆ, ಅವರ ಭವಿಷ್ಯ ಹಾಗೂ ಕ್ರಿಕೆಟ್‌ಗೆ ನೀಡಿದ ಕೊಡುಗೆಯ ಬಗ್ಗೆ ಯಾರೊಬ್ಬರೂ ಪ್ರಶ್ನಿಸುವಂತಿಲ್ಲ’ ಎಂದು ಹೇಳಿದ್ದಾರೆ.

ಮುಂದುವರಿದು, ‘ವೃತ್ತೀಯ ಜವಾಬ್ದಾರಿಗಳನ್ನು ಪಕ್ಕಕ್ಕಿಟ್ಟರೆ, ಆಯ್ಕೆ ಸಮಿತಿ ಸದಸ್ಯರೂ ಎಲ್ಲರಂತೆ ಧೋನಿಗೆ ದೊಡ್ಡ ಅಭಿಮಾನಿಗಳೇ. ಧೋನಿ ಎಲ್ಲವನ್ನೂ ಸಾಧಿಸಿದ್ದಾರೆ. ಎರಡು ವಿಶ್ವಕಪ್‌ ಗೆದ್ದುಕೊಟ್ಟಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಜಯಿಸಿದ್ದಾರೆ. ಟೆಸ್ಟ್‌ನಲ್ಲಿ ಭಾರತವನ್ನು ನಂ. 1 ಸ್ಥಾನಕ್ಕೆ ಕೊಂಡೊಯ್ದಿದ್ದಾರೆ’ ಎಂದು ತಿಳಿಸಿದ್ದಾರೆ.

ಆದಾಗ್ಯೂ ಧೋನಿ ಮತ್ತೆ ತಂಡದ ಪರ ಕಣಕ್ಕಿಳಿಯಲಿದ್ದಾರೆಯೇ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿದೆ.

ವಿಶ್ವ ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿರುವ ಧೋನಿ, ನಾಯಕರಾಗಿ ಭಾರತಕ್ಕೆ ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ಏಕದಿನ ಹಾಗೂ 90 ಟೆಸ್ಟ್‌ಗಳನ್ನು ಆಡಿರುವ ಅವರು 15,000ಕ್ಕೂ ಹೆಚ್ಚು ರನ್‌ ಕಲೆಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.