ದುಬೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ತಮ್ಮ ಕ್ರೀಡಾ ಜೀವನದಲ್ಲಿ ಮಗದೊಂದು ಮೈಲಿಗಲ್ಲು ಸಾಧಿಸಿದ್ದಾರೆ.
40ರ ಹರೆಯದ ಧೋನಿ ಮುಂದಿನ ವರ್ಷವೂ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುತ್ತಾರೆಯೋ ಅಥವಾ ವಿದಾಯ ಸಲ್ಲಿಸಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಆದರೆ ಈ ಕುರಿತು ಧೋನಿ ರಹಸ್ಯ ಬಿಟ್ಟುಕೊಡಲಿಲ್ಲ.
ಪಂದ್ಯದ ಬಳಿಕ ಈ ಬಗ್ಗೆ ಕೇಳಿದಾಗ, ಇವೆಲ್ಲವೂ ಆಟಗಾರರನ್ನು ಉಳಿಸಿಕೊಳ್ಳುವ ಬಿಸಿಸಿಐ ನಿರ್ಧಾರವನ್ನು ಅವಲಂಬಿಸಿದೆ ಎಂದಷ್ಟೇ ಉತ್ತರಿಸಿದರು. ಹಾಗಾದರೆ ಸಿಎಸ್‌ಕೆಗಾಗಿ ಕಳೆದ 12 ವರ್ಷಗಳಲ್ಲಿ ನೀವು ಬಿಟ್ಟು ಹೋದ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೀರಾ ಎಂದು ಕೇಳಿದಾಗ, 'ನಾನಿನ್ನೂ ಬಿಟ್ಟು ಹೋಗಿಲ್ಲ' ಎಂದು ನಗುಮುಖದಿಂದಲೇ ಉತ್ತರಿಸಿದರು. ಈ ಮೂಲಕ ಚೆನ್ನೈ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು.
'ನಾನು ಈ ಮೊದಲೇ ಹೇಳಿದಂತೆ ಇವೆಲ್ಲವೂ ಬಿಸಿಸಿಐ ನಿರ್ಧಾರವನ್ನು ಅವಲಂಬಿಸಿರುತ್ತದೆ. ಎರಡು ಹೊಸ ತಂಡಗಳು ಸೇರಲಿರುವುದರಿಂದ ಸಿಎಸ್‌ಕೆಗೆ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಬೇಕು' ಎಂದು ಹೇಳಿದರು.
'ನಾನು ಅಗ್ರ ಮೂರು ಅಥವಾ ನಾಲ್ಕು ಆಟಗಾರರ ಸ್ಥಾನದಲ್ಲಿ ಇರುತ್ತೇನೆಯೇ ಎಂಬುದಲ್ಲ. ಫ್ರಾಂಚೈಸಿಗೆ ತೊಂದರೆ ಆಗದಂತೆ ಬಲಿಷ್ಠ ತಂಡ ರಚಿಸಬೇಕಿದೆ. ಮುಂದಿನ 10 ವರ್ಷಗಳ ಕಾಲ ಯಾರು ಉತ್ತಮ ನಿರ್ವಹಣೆ ನೀಡಬಲ್ಲರು ಎಂಬುದನ್ನು ಗುರುತಿಸಬೇಕಿದೆ' ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಂಡಕ್ಕೆ ಬೆಂಬಲ ಸೂಚಿಸಿದ ಎಲ್ಲ ಅಭಿಮಾನಿಗಳಿಗೆ ಧೋನಿ ಧನ್ಯವಾದಗಳನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.