ADVERTISEMENT

ದೊಡ್ಡತನ ಮೆರೆಯದ ತಾರಾ ಆಟಗಾರ ಪೂಜಾರ: ಅಭಿಮಾನಿಗಳು ಕಿಡಿ ಕಿಡಿ

ಗಿರೀಶದೊಡ್ಡಮನಿ
Published 28 ಜನವರಿ 2019, 4:07 IST
Last Updated 28 ಜನವರಿ 2019, 4:07 IST
ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಚೇತೇಶ್ವರ್ ಪೂಜಾರ  –ಪ್ರಜಾವಾಣಿ ಚಿತ್ರ
ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ಚೇತೇಶ್ವರ್ ಪೂಜಾರ  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸೌರಾಷ್ಟ್ರದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಭಾನುವಾರವೂ ಕ್ರಿಕೆಟ್‌ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದ ನಾಲ್ಕನೇ ದಿನ ಗೆಲುವಿಗೆ 279 ರನ್‌ಗಳ ಬೆನ್ನಟ್ಟಿದ ಸೌರಾಷ್ಟ್ರ ತಂಡವು ಊಟಕ್ಕೆ ಮುನ್ನ 23 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 68 ರನ್ ಗಳಿಸಿತ್ತು. ವಿರಾಮದ ನಂತರದ ಮೂರನೇ ಓವರ್‌ನಲ್ಲಿ ವಿನಯಕುಮಾರ್ ಎಸೆತವನ್ನು ಕಟ್ ಮಾಡಲು ಪೂಜಾರ ಯತ್ನಿಸಿದರು. ಆದರೆ ಚೆಂಡು ಹಿಂದೆ ನುಗ್ಗಿತು. ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಕ್ಯಾಚ್ ಮಾಡಿದರು. ಕೀಪರ್, ಬೌಲರ್ ಮತ್ತು ಫೀಲ್ಡರ್‌ಗಳು ವಿಕೆಟ್ ಪಡೆದ ಸಂಭ್ರಮದಲ್ಲಿ ಕುಣಿದಾಡಿದರು. ಆದರೆ ಅಂಪೈರ್ ಖಾಲೀದ್ ಹುಸೇನ್ ಸೈಯ್ಯದ್ ಅವರ ಕೈಬೆರಳು ಮುಗಿಲಿನತ್ತ ಮುಖ ಮಾಡಲೇ ಇಲ್ಲ. ವಿನಯಕುಮಾರ್ ಮತ್ತು ಅಂಪೈರ್ ನಡುವೆ ಬಿಸಿ ಬಿಸಿ ಮಾತುಕತೆ ನಡೆಯಿತು.

ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಚೀಟರ್‌ ಚೀಟರ್‌ (ಮೋಸಗಾರ) ಎಂದುಕೂಗಿ ಪೂಜಾರ ಮತ್ತು ಅಂಪೈರ್‌ ವಿರುದ್ಧ ಕಿಡಿಕಾರಿದರು. ಸಾಮಾಜಿಕ ಜಾಲತಾಣಗಳು ಮತ್ತೊಮ್ಮೆ ಪೂಜಾರ ಅವರನ್ನು ತರಾಟೆಗೆ ತೆಗೆದುಕೊಂಡವು. ‘ಮೊದಲ ಇನಿಂಗ್ಸ್‌ನಲ್ಲಿಯೂ ಕ್ರೀಡಾ ಸ್ಫೂರ್ತಿ ಮೆರೆದಿರಲಿಲ್ಲ. ಆ ತಪ್ಪು ತಿದ್ದಿಕೊಳ್ಳುವ ಅವಕಾಶ ಈಗ ಇತ್ತು. ಅದನ್ನೂ ಮಾಡಲಿಲ್ಲ’ ಎಂದು ಟೀಕಿಸಿದ್ದಾರೆ.

ADVERTISEMENT

ಈ ಹಂತದಲ್ಲಿ ಪೂಜಾರ ಅವರು ಕೇವಲ 34 ರನ್‌ ಗಳಿಸಿದ್ದರು. ನಂತರ ಅವರು ಶೆಲ್ಡನ್ ಜಾಕ್ಸನ್ ಜೊತೆಗೆ ಶತಕದ ಜೊತೆಯಾಟವಾಡಿದರು. ವೈಯಕ್ತಿಕ ಶತಕವನ್ನೂ ಗಳಿಸಿದರು. ತಂಡದ ಗೆಲುವಿನ ಅವಕಾಶವನ್ನು ಹೆಚ್ಚಿಸಿದರು.

ಮೊದಲ ಇನಿಂಗ್ಸ್‌ನಲ್ಲಿಯೂ ಇಂತಹದೇ ಘಟನೆ ನಡೆದಿತ್ತು. 23ನೇ ಓವರ್‌ನಲ್ಲಿ ಮಿಥುನ್ ಎಸೆತವನ್ನು ಕಟ್ ಮಾಡಲು ಪೂಜಾರ ಪ್ರಯತ್ನಿಸಿದರು. ಅವರ ಬ್ಯಾಟ್‌ನ ಹಿಡಿಕೆಯ ಪಕ್ಕದ ಅಂಚಿಗೆ ಸವರಿಕೊಂಡು ಹೋದ ಚೆಂಡು ವಿಕೆಟ್‌ಕೀಪರ್ ಶರತ್ ಶ್ರೀನಿವಾಸ್ ಕೈ ಸೇರಿತು. ಕರ್ನಾಟಕದ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಆದರೆ ಅಂಪೈರ್ ಔಟ್ ಕೊಡಲಿಲ್ಲ. ಫೀಲ್ಡರ್‌ಗಳ ಪರಿಪರಿಯ ಒತ್ತಾಯ, ಮಾತುಗಳ ವಿನಿಮಯ ಜೋರಾಗಿಯೇ ನಡೆಯಿತು. ಕೆಲ ನಿಮಿಷಗಳ ನಂತರ ಆಟ ಮುಂದುವರೆಯಿತು. ಆದರೆ ಟಿ.ವಿ. ರೀಪ್ಲೆಯಲ್ಲಿ ಚೆಂಡು ಬ್ಯಾಟ್‌ ಸವರಿದ್ದು ಸ್ಪಷ್ಟವಾಗಿತ್ತು. ಆಗ ಪೂಜಾರ ಕೇವಲ ಒಂದು ರನ್‌ ಗಳಿಸಿದ್ದರು. ಅವರು 45 ರನ್‌ ಗಳಿಸಿದ್ದಾಗ ಮಿಥುನ್ ಅವರಿಗೇ ವಿಕೆಟ್ ಒಪ್ಪಿಸಿದರು.

ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ ವಿರುದ್ಧ ಟೀಕೆಗಳ ಮಳೆ ಸುರಿದಿತ್ತು. ‘ದೊಡ್ಡ ಆಟಗಾರನಾಗಿರುವ ಪೂಜಾರ ತಾವೇ ಹೊರನಡೆಯಬೇಕಿತ್ತು. ಕ್ರೀಡಾ ಸ್ಫೂರ್ತಿ ಮೆರೆಯಬೇಕಿತ್ತು’ ಎಂದೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯನ್ನು ಭಾರತ ತಂಡವು ಗೆಲ್ಲಲು ಪೂಜಾರ ಅಟವು ಪ್ರಮುಖ ಪಾತ್ರ ವಹಿಸಿತ್ತು. ಆಗ ಅವರನ್ನು ಭಾರತದ ಮತ್ತೊಬ್ಬ ‘ಗೋಡೆ’ ಎಂದು ರಾಹುಲ್ ದ್ರಾವಿಡ್ ಅವರಿಗೆ ಹೋಲಿಕೆ ಮಾಡಲಾಗಿತ್ತು.

ಸದ್ಯಸೌರಾಷ್ಟ್ರ ತಂಡ ಬ್ಯಾಟಿಂಗ್‌ ಮುಂದುವರಿಸಿದ್ದು, ತಂಡದ ಗೆಲುವಿಗೆ 76 ರನ್‌ಗಳ ಅವಶ್ಯಕತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.