ರಾಜ್‌ಕೋಟ್: ಸೌರಾಷ್ಟ್ರ ಕ್ರಿಕೆಟ್ ತಂಡದ ಬ್ಯಾಟರ್ ಚೇತೇಶ್ವರ್ ಪೂಜಾರ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಾರ್ಖಂಡ್ ಎದುರು ದ್ವಿಶತಕ ಗಳಿಸಿದರು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ (ಔಟಾಗದೆ 243; 356ಎ, 4X30) ಅವರಿಗೆ ಇದು 17ನೇ ದ್ವಿಶತಕವಾಗಿದೆ.
ಇದರೊಂದಿಗೆ ಅವರು ಇಂಗ್ಲೆಂಡ್‌ನ ಹರ್ಬರ್ಟ್ ಸಟ್‌ಕ್ಲಿಫ್ ಮತ್ತು ಮಾರ್ಕ್ ರಾಂಪ್ರಕಾಶ್ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಪಟ್ಟಿಯ ಅಗ್ರಸ್ಥಾನದಲ್ಲಿ ಡಾನ್ ಬ್ರಾಡ್ಮನ್ (37) ಇದ್ದಾರೆ. ವ್ಯಾಲಿ ಹಮಂಡ್ (36) ಮತ್ತು ಪ್ಯಾಟ್ಸಿ ಹೆಂಡ್ರೆನ್ (22) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಪೂಜಾರ ಅವರಿಗೆ ಇದು ಎಂಟನೇ ದ್ವಿಶತಕವಾಗಿದೆ. ಈ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಪಾರಸ್ ಡೋಗ್ರಾ (9) ಮೊದಲ ಸ್ಥಾನದಲ್ಲಿದ್ದಾರೆ. ಪೂಜಾರ ಅವರು ಭಾರತ ತಂಡಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಿಂದ ಇಲ್ಲಿಯವರೆಗೆ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಲಭಿಸಿಲ್ಲ.
ಈ ಪಂದ್ಯದಲ್ಲಿ ಅವರ ದ್ವಿಶತಕ ಮತ್ತು ಪ್ರೇರಕ್ ಮಂಕಡ್ (ಔಟಾಗದೆ 104) ಅವರ ಶತಕದ ಬಲದಿಂದ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್‌ನಲ್ಲಿ 156 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 578 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅದಕ್ಕುತ್ತರವಾಗಿ ಜಾರ್ಖಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 45 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 140 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಜಾರ್ಖಂಡ್: 142. ಸೌರಾಷ್ಟ್ರ: 156 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 578 (ಹರ್ವಿಕ್ ದೇಸಾಯಿ 85, ಚೇತೇಶ್ವರ್ ಪೂಜಾರ ಔಟಾಗದೆ 243, ಪ್ರೇರಕ್ ಮಂಕಡ್ ಔಟಾಗದೆ 104) ಎರಡನೇ ಇನಿಂಗ್ಸ್: ಜಾರ್ಖಂಡ್: 45 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 140 (ಕುಮಾರ್ ದೇವವ್ರತ್ ಬ್ಯಾಟಿಂಗ್ 74, ನಝಿಂ ಸಿದ್ದೀಕಿ 45, ಪ್ರೇರಕ್ ಮಂಕಡ್ 12ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.