ADVERTISEMENT

ಭಾರತ ಟೆಸ್ಟ್ ತಂಡದಿಂದ ಹೊರಗಿಟ್ಟಿದ್ದು ಹತಾಶೆ ಹುಟ್ಟಿಸಿದೆ: ಪೂಜಾರ

ಪಿಟಿಐ
Published 21 ಆಗಸ್ಟ್ 2023, 13:55 IST
Last Updated 21 ಆಗಸ್ಟ್ 2023, 13:55 IST
ಚೇತೇಶ್ವರ್‌ ಪೂಜಾರ
ಚೇತೇಶ್ವರ್‌ ಪೂಜಾರ   

ಲಂಡನ್: ಭಾರತದ ಟೆಸ್ಟ್ ಕ್ರಿಕೆಟ್ ತಂಡದಿಂದ ತಮ್ಮನ್ನು ಕೈಬಿಟ್ಟ ಬಗ್ಗೆ ಹಿರಿಯ ಕ್ರಿಕೆಟಿಗ ಚೇತೇಶ್ವರ ಪೂಜಾರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಭಾರತ ಟೆಸ್ಟ್ ತಂಡದಿಂದ ನನ್ನನ್ನು ಕೈಬಿಟ್ಟಿದ್ದು ಅತ್ಯಂತ ಹತಾಶೆಯನ್ನು ಉಂಟು ಮಾಡಿದೆ ಮತ್ತು ವೈಯಕ್ತಿಕ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ, ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡದಲ್ಲಿ ಪೂಜಾರ ಅವರಿಗೆ ಅವಕಾಶ ನೀಡಲಾಗಿರಲಿಲ್ಲ.

ADVERTISEMENT

ಭಾರತದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೂಜಾರ, ಜೂನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಎರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ಕೇವಲ 14 ಮತ್ತು 27 ರನ್ ಕಲೆ ಹಾಕಿದ್ದರು.

‘ಕಳೆದ ಕೆಲ ತಿಂಗಳುಗಳಿಂದ ನನ್ನ ಜೀವನದಲ್ಲಿ ಏರಿಳಿತ ಕಂಡುಬರುತ್ತಿದೆ. 90ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದರೂ ಈಗಲೂ ನಾನು ನನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಇದು ಒಂದು ವಿಭಿನ್ನ ಸವಾಲು’ ಎಂದು ಫೈನಲ್ ವರ್ಡ್ ಪಾಡ್‌ಕಾಸ್ಟ್‌ನಲ್ಲಿ ಪೂಜಾರ ಹೇಳಿದ್ದಾರೆ.

'ಬಹಳಷ್ಟು ಪಂದ್ಯಗಳನ್ನು ಆಡಿ, ಐದಾರು ಸಾವಿರ ರನ್ ಗಳಿಸಿದ ಬಳಿಕವೂ ತಮ್ಮನ್ನು ತಾವು ಮತ್ತೆ ಸಾಬೀತುಪಡಿಸಬೇಕೆಂದರೆ ಅದು ಹತಾಶೆಯ ವಿಷಯ. ಅದು ನಿಜಕ್ಕೂ ಸುಲಭವಲ್ಲ. ನಾನೊಬ್ಬ ಉತ್ತಮ ಆಟಗಾರನಾಗಿದ್ದಾಗಲೂ ಆ ರೀತಿ ಆದಾಗ ಅದು ನಮ್ಮ ಆತ್ಮಸ್ಥೈರ್ಯಕ್ಕೆ ಪೆಟ್ಟು ಬೀಳುತ್ತದೆ. ನಮ್ಮ ಸಾಮರ್ಥ್ಯದ ಮೇಲೇ ನಮಗೆ ಸಂಶಯ ಮೂಡಿಸುತ್ತದೆ’ಎಂದು ಪೂಜಾರ ಹೇಳಿದ್ದಾರೆ.

‘ನೀವು ಮತ್ತೆ ಮತ್ತೆ ನಿಮ್ಮನ್ನು ಸಾಬೀತುಪಡಿಸಬೇಕೆಂದರೆ ಅದಕ್ಕೇನಾದರೂ ಮೌಲ್ಯವಿದೆಯಾ?’ ಎಂದು ಇಂಗ್ಲಿಷ್ ಕೌಂಟಿ ತಂಡ ಸಸೆಕ್ಸ್ ಪರ ಆಡುತ್ತಿರುವ ಪೂಜಾರ ಪ್ರಶ್ನಿಸಿದ್ದಾರೆ.

ಈ ಹಿಂದಿನ(2021–2023) ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಆವೃತ್ತಿಯಲ್ಲಿ ಪೂಜಾರ 17 ಟೆಸ್ಟ್‌ಗಳಿಂದ 928 ರನ್ ಕಲೆ ಹಾಕುವ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ಖ್ಯಾತಿ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.