ಮುಂಬೈ: 'ರನ್ ಮೆಶಿನ್' ಖ್ಯಾತಿಯ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರಿದಿದೆ. ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೇವಲ 9 ರನ್ ಗಳಿಸಿ ಔಟಾಗಿದ್ದರು.
ಈ ಮಧ್ಯೆ ಜತಿನ್ ಸಪ್ರು ಯೂಟ್ಯೂಬ್ ಚಾನೆಲ್‌ನಲ್ಲಿ ವಿರಾಟ್‌ಗೆ ಸಲಹೆ ನೀಡಿರುವ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ, ಐಪಿಎಲ್ ಬಿಟ್ಟು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
'ಕೊಹ್ಲಿ ನಾನ್-ಸ್ಟಾಪ್ ಕ್ರಿಕೆಟ್ ಆಡುತ್ತಿದ್ದಾರೆ. ಎಲ್ಲ ಮಾದರಿಯಲ್ಲೂ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದಾರೆ. ಹಾಗಾಗಿ ವಿರಾಮ ಪಡೆದುಕೊಳ್ಳುವುದು ಉತ್ತಮ ನಿರ್ಧಾರವಾಗಲಿದೆ. ಕೆಲವೊಮ್ಮೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ 6-7 ವರ್ಷಗಳ ಕಾಲ ಛಾಪು ಮೂಡಿಸಲು ಬಯಸುವುದಾದರೆ, ಐಪಿಎಲ್‌ನಿಂದ ಹೊರಗುಳಿದು ವಿಶ್ರಾಂತಿ ಪಡೆಯುವುದು ಸೂಕ್ತ' ಎಂದು ಹೇಳಿದ್ದಾರೆ.
'ನೀವು 14-15 ವರ್ಷಗಳಿಂದ ಆಡಿದ್ದೀರಿ. ಕೇವಲ ವಿರಾಟ್‌ಗೆ ಮಾತ್ರವಲ್ಲ. ಪ್ರತಿಯೊಬ್ಬರಿಗೂ ನಾನಿದನ್ನು ಹೇಳಲು ಬಯಸುತ್ತೇನೆ. ನೀವು ಭಾರತಕ್ಕಾಗಿ ಉತ್ತಮ ನಿರ್ವಹಣೆ ನೀಡಲು ಬಯಸಿದರೆ ವಿರಾಮವನ್ನು ತೆಗೆದುಕೊಳ್ಳಲು ಬಯಸುವ ರೇಖೆಯನ್ನು ಎಳೆಯಬೇಕು. ಭಾರತವು ಆಡದಿರುವ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಸೂಕ್ತವೆನಿಸಲಿದೆ. ಕೆಲವೊಮ್ಮೆ ಫ್ರಾಂಚೈಸ್‌ಗೆ ನಿಮ್ಮ ನಿರ್ಧಾರ ಹೇಳಬೇಕಾಗುತ್ತದೆ. ನಾನು ಅರ್ಧದಷ್ಟು ಮಾತ್ರ ಆಡುತ್ತೇನೆ. ನನಗೆ ಅರ್ಧ ಮಾತ್ರ ಪಾವತಿಸಿ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೃತ್ತಿಯ ಉತ್ತಂಗಕ್ಕೆ ಏರಲು ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.