ಅಹಮದಾಬಾದ್: ಕಳೆದ ಪಂದ್ಯದಲ್ಲಿ ಮಯಂಕ್ ಯಾದವ್ ಅವರ ವೇಗದ ದಾಳಿಗೆ ಕಂಗೆಟ್ಟಿದ್ದ ಪಂಜಾಬ್ ಕಿಂಗ್ಸ್, ಮೊಟೆರಾದಲ್ಲಿ ಗುರುವಾರ ನಡೆಯುವ ಐಪಿಎಲ್ ಮುಖಾಮುಖಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.
ಒಂದೆಡೆ, ತವರಿನಿಂದ ಹೊರಗೆ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಶಿಖರ್ ಧವನ್ ಪಡೆ, ಚೈತನ್ಯ ನೀಡುವ ಗೆಲುವಿಗೆ ಯತ್ನಿಸಲಿದೆ. ಇನ್ನೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೇಲೆ ಏಳು ವಿಕೆಟ್‌ಗಳ ಸುಲಭ ಜಯ ಪಡೆದಿರುವ ಗುಜರಾತ್ ಟೈಟನ್ಸ್ ತವರಿಗೆ ಈ ಪಂದ್ಯವಾಡಲು ಆತ್ಮವಿಶ್ವಾಸದಿಂದ ಸಜ್ಜಾಗಿದೆ.
ಪಂಜಾಬ್ ಕಿಂಗ್ಸ್, ಲಖನೌದಲ್ಲಿ ನಡೆದ ಪಂದ್ಯದಲ್ಲಿ ಒಂದು ಹಂತದಲ್ಲಿ ಗೆಲುವಿನತ್ತ ಮುನ್ನಡೆದಿದ್ದರೂ, ಚೊಚ್ಚಲ ಪಂದ್ಯ ಆಡಿದ ಮಯಂಕ್ ಅವರ ಉರಿವೇಗದ ದಾಳಿಯಿಂದಾಗಿ ಹಿಡಿತ ಕಳೆದುಕೊಂಡಿತು. ಪದೇ ಪದೇ 150 ಕಿ.ಮೀ. ವೇಗದ ಎಸೆತಗಳನ್ನು ಮಯಂಕ್ ಪ್ರಯೋಗಿಸಿದ್ದರು.
ಆದರೆ ಟೈಟನ್ಸ್ ಎದುರು ಪಂಜಾಬ್‌ಗೆ ಭಿನ್ನ ರೀತಿಯ ದಾಳಿ ಎದುರಾಗಲಿದೆ. ಅನುಭವಿ ಮೋಹಿತ್ ಶರ್ಮಾ ಅವರು ವೈವಿಧ್ಯಮಯ ದಾಳಿಯಿಂದಾಗಿ ಯಶಸ್ಸು ಪಡೆಯುತ್ತಿದ್ದಾರೆ. ಸ್ಲೋ ಬೌನ್ಸರ್, ಯಾರ್ಕರ್, ಬ್ಯಾಟರ್‌ಗಳನ್ನು ವಂಚಿಸುವ ‘ನಕಲ್ ಬಾಲ್’ ಪ್ರಯೋಗಿಸುತ್ತಿದ್ದಾರೆ. ಅವರ ಜೊತೆಗೆ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರ ಸ್ಪಿನ್ ಆಸ್ತ್ರವೂ ಪರಿಣಾಮಕಾರಿ ಎನಿಸಿದೆ. ಅಫ್ಗಾನಿಸ್ತಾನದ ಇನ್ನೊಬ್ಬ ಆಲ್‌ರೌಂಡರ್ ಅಜ್ಮತ್‌ಉಲ್ಲಾ ಒಮರ್‌ಝೈ ಕೂಡ ಉಪಯುಕ್ತ ಬೌಲರ್.
ಮೊಣಕಾಲಿನ ಸ್ನಾಯು ನೋವಿಗೆ ಒಳಗಾಗಿರುವ ಪಂಜಾಬ್ ಕಿಂಗ್ಸ್‌ನ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಈ ಪಂದ್ಯಕ್ಕೆ ಲಭ್ಯರಿದ್ದಾರೆಯೇ ಎನ್ನುವುದು ಖಚಿತವಾಗಿಲ್ಲ. ಅವರು ಅಲಭ್ಯರಾದಲ್ಲಿ ‘ಫಿನಿಷರ್’ ಕೊರತೆ ಕಾಡಲಿದೆ.
ಪಂಜಾಬ್‌ಗೆ ‘ಡೆತ್ ಬೌಲಿಂಗ್’ ಸಮಸ್ಯೆಯೂ ಕಳವಳಕ್ಕೆ ಕಾರಣವಾಗಿದೆ. ಹರ್ಷಲ್ ಪಟೇಲ್ ಪ್ರತಿ ಓವರ್‌ಗೆ 11.41 ರನ್ ತೆತ್ತು ದುಬಾರಿಯಾಗುತ್ತಿದ್ದಾರೆ. ರಾಹುಲ್ ಚಾಹರ್ ಅವರೂ ಪರಿಣಾಮಕಾರಿ ಆಗಿಲ್ಲ. ಭಾರತ ತಂಡದ ಬೌಲರ್ ಅರ್ಷದೀಪ್ ಸಿಂಗ್ ಮೊದಲಿನ ಲಯ ಕಂಡುಕೊಂಡಿಲ್ಲ. ಇದೂ ಕಿಂಗ್ಸ್ ಚಿಂತೆಗೆ ಕಾರಣವಾಗಿದೆ.
ಟೈಟನ್ಸ್ ಪಂದ್ಯದ ಬ್ಯಾಟರ್‌ಗಳು ಒಟ್ಟಾಗಿ ಅಬ್ಬರಿಸಿಲ್ಲ. ಆದರೆ ಬೌಲರ್‌ಗಳು ಪಂದ್ಯ ಗೆಲ್ಲಿಸಿಕೊಡುತ್ತಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30.
ಮಖಾಮುಖಿ
ಆಡಿರುವ ಪಂದ್ಯಗಳು 3
ಗುಜರಾತ್‌ಗೆ ಗೆಲುವು 2
ಪಂಜಾಬ್‌ಗೆ ಗೆಲುವು 1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.